ಕರ್ನಾಟಕಪ್ರಮುಖ ಸುದ್ದಿ

ಮುನ್ನೆಚ್ಚರಿಕೆ ವಹಿಸುವುದರಿಂದ ಕ್ಷಯ ರೋಗ ಬಾರದಂತೆ ತಡೆಯಬಹುದು : ರಾಜ್ಯಪಾಲ ವಜುಭಾಯಿವಾಲಾ

ರಾಜ್ಯ(ಬೆಂಗಳೂರು)ಅ.9:- ಕ್ಷಯ ರೋಗದ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದರಿಂದ ರೋಗ ಬಾರದಂತೆ ನೋಡಿಕೊಳ್ಳುವ ಜತೆಗೆ ತಡೆಗಟ್ಟಲು ಸಹಕಾರಿಯಾಗಲಿದೆ ಎಂದು ರಾಜ್ಯಪಾಲ ವಜುಭಾಯಿವಾಲಾ ಹೇಳಿದರು.

ಕಿಡ್ನಿ, ಲಿವರ್, ಹೃದಯದ ಕಸಿ ಮಾಡಿದಂತೆ ಕ್ಷಯ ರೋಗಿಗಳಿಗೆ ಕಸಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ರೋಗ ಬಾರದಂತೆ ಎಚ್ಚರಿಕೆ ಮತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು. ರಾಜ್ಯಭವನದಲ್ಲಿಂದು ಹಮ್ಮಿಕೊಂಡಿದ್ದ 68ನೇ ಕ್ಷಯ ರೋಗ ಮುದ್ರಾ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಕ್ಷಯ ರೋಗಿಗಳು ರೋಗದ ಬಗ್ಗೆ ನಿರ್ಲಕ್ಷ್ಯ ವಹಿಸದೆ ಅಗತ್ಯ ಚಿಕಿತ್ಸೆ ಪಡೆಯುವುದರಿಂದ ರೋಗವನ್ನು ಗುಣಮುಖಪಡಿಸಲು ಸಾಧ್ಯ ಎಂದರು. ರಾಜ್ಯದಲ್ಲಿ ಶೇ. 90 ರಷ್ಟು ಕ್ಷಯ ರೋಗ ನಿರ್ಮೂಲನೆಯಾಗಿದ್ದು, ಮುಂದಿನ ವರ್ಷಗಳಲ್ಲಿ ಸಂಪೂರ್ಣ ರೋಗ ಇರದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಆರೋಗ್ಯ ಸಚಿವ ರಮೇಶ್‌ಕುಮಾರ್ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುವ ಕ್ಷಯ ರೋಗಿಗಳ ಬಗ್ಗೆ ಮಾಹಿತಿ ಇರುತ್ತದೆ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳ ಕುರಿತು ಸರ್ಕಾರದ ಬಳಿ ಯಾವುದೇ ಮಾಹಿತಿ ಇರುವುದಿಲ್ಲ. ಖಾಸಗಿ ಆಸ್ಪತ್ರೆಗಳು ತಮ್ಮ ಬಳಿಗೆ ಬರುವ ಹಾಗೂ ಚಿಕಿತ್ಸೆ ಪಡೆಯುವ ಕ್ಷಯ ರೋಗಿಗಳ ಪಟ್ಟಿ ನೀಡಿದರೆ ಸರ್ಕಾರದಿಂದಲೂ ಅಗತ್ಯ ಸಹಾಯ, ಸಹಕಾರ ನೀಡಲು ಸಾಧ್ಯವಾಗಲಿದೆ ಎಂದರು.

2035ರ ವೇಳೆಗೆ ಭಾರತವನ್ನು ಸಂಪೂರ್ಣ ಕ್ಷಯಮುಕ್ತ ದೇಶವನ್ನಾಗಿ ಮಾಡಲು ಗುರಿ ಹಾಕಿಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಕೆಲಸ ಮಾಡುತ್ತಿದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳು ಸರ್ಕಾರದ ಜತೆ ಕೈಜೋಡಿಸುವಂತೆ ಕರೆ ನೀಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿರಜನೀಶ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: