ಕರ್ನಾಟಕ

ನಿಯಮ ಬಾಹಿರ ವಾಹನಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ಮಡಿಕೇರಿ ಅ. 10 : ಹೊರ ರಾಜ್ಯದಿಂದ ಕೊಡಗು ಜಿಲ್ಲೆಯನ್ನು ಪ್ರವೇಶಿಸುತ್ತಿರುವ ವಾಹನಗಳು ಸಾರಿಗೆ ನಿಯಮವನ್ನು ಉಲ್ಲಂಘಿಸುತ್ತಿರುವುದರಿಂದ ಕೊಡಗು ಜಿಲ್ಲಾ ಪ್ರವಾಸಿಗರ ವಾಹನ ಮಾಲೀಕರು ಮತ್ತು ಚಾಲಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿರುವ ಸಂಘದ ಅಧ್ಯಕ್ಷರಾದ ಸಂಪತ್ ಕುಮಾರ್ ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬಿಳಿಬಣ್ಣದ ಸಂಖ್ಯಾ ಫಲಕ ಹೊಂದಿರುವ ವಾಹನಗಳು ಕೂಡ ಸಾರಿಗೆ ನಿಯಮವನ್ನು ಉಲ್ಲಂಘಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕರಿಕೆ, ಪೆರಂಬಾಡಿ, ಕುಟ್ಟ ಸೇರಿದಂತೆ ಕೊಡಗಿನ ಗಡಿಭಾಗಗಳಲ್ಲಿ ಸಾರಿಗೆ ಇಲಾಖೆ ತನಿಖಾ ಕೇಂದ್ರ ತೆರೆಯಬೇಕು, ಹೊರ ರಾಜ್ಯದಿಂದ ಬರುವ ವಾಹನಗಳನ್ನು ತಪಾಸಣೆಗೆ ಒಳಪಡಿಸಬೇಕು, 300 ರೂ. ಪಾವತಿಸಿ ಅನುಮತಿ ಪಡೆದು ಬರುವ ಹೊರ ರಾಜ್ಯದ ವಾಹನಗಳು ಕೊಡಗು ಜಿಲ್ಲೆಯಲ್ಲಿ ರಾಜಾರೋಷವಾಗಿ ಬಂದು, ಹೋಗುತ್ತಿರುವ ಬಗ್ಗೆ ಗಮನಹರಿಸಬೇಕು, ತೆರಿಗೆ ವಂಚನೆ ಮಾಡಿ ಕಾನೂನು ಬಾಹಿರವಾಗಿ ಬಿಳಿ ಬಣ್ಣದ ಸಂಖ್ಯಾ ಫಲಕ ಹೊಂದಿರುವ ವಾಹನಗಳು ಟ್ಯಾಕ್ಸಿಗಲಾಗಿ ಸಂಚರಿಸದುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು, ಹೋಂಸ್ಟೇಗಳಲ್ಲಿ ಹಾಗೂ ಹೊಟೇಲ್‍ಗಳಲ್ಲಿ ಅನಧಿಕೃತವಾಗಿ ಬಿಳಿ ಬಣ್ಣದ ಸಂಖ್ಯಾ ಫಲಕದ ವಾಹನಗಳನ್ನು ಟ್ಯಾಕ್ಸಿಯಾಗಿ ಪ್ರವಾಸಿಗರಿಗೆ ಬಾಡಿಗೆಗೆ ನೀಡುತ್ತಿರುವುದರ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆಂದು ಸಂಪತ್ ಕುಮಾರ್ ಒತ್ತಾಯಿಸಿದರು.

ಪ್ರತಿವರ್ಷ ಟ್ಯಾಕ್ಸಿ ವಾಹನಗಳಿಗೆ ವಿಮೆಯನ್ನು ಅಧಿಕಗೊಳಿಸಲಾಗುತ್ತಿದೆ. ದಸರಾ ಹಬ್ಬದ ಸಮಯದಲ್ಲಿ ಹೊರ ರಾಜ್ಯದಿಂದ ಬರುವ ಹಳದಿ ಬೋರ್ಡ್ ವಾಹನಗಳಿಗೆ ಒಂದು ತಿಂಗಳ ಅವಧಿಗೆ ಯಾವುದೇ ತೆರಿಗೆಯನ್ನು ವಿಧಿಸುವುದಿಲ್ಲ. ಇದು ಕರ್ನಾಟಕ ರಾಜ್ಯದ ದಸರಾ ಕೊಡುಗೆಯಾಗಿದೆ ಎಂದು ಅವರು ಟೀಕಿಸಿದರು.
ಕರ್ನಾಟಕ ರಾಜ್ಯದ ಹಳದಿ ಬೋರ್ಡ್ ವಾಹನಗಳಿಗೆ ಕೂಡ ಶಬರಿಮಲೆ ಯಾತ್ರೆಯ ಸಮಯದಲ್ಲಿ ಯಾವುದೇ ತೆರಿಗೆಯನ್ನು ವಿಧಿಸದೆ ಕೇರಳ ರಾಜ್ಯವನ್ನು ಪ್ರವೇಶಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು. ಬಿಳಿ ಬಣ್ಣದ ಸಂಖ್ಯಾ ಫಲಕದ ವಾಹನವನ್ನು ಟ್ಯಾಕ್ಸಿ ರೂಪದಲ್ಲಿ ಕಾನೂನು ಬಾಹಿರವಾಗಿ ಬಳಸುತ್ತಿರುವ ಬಗ್ಗೆ ಸಚಿವರು, ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಹಾಗೂ ಸಾರಿಗೆ ಅಧಿಕಾರಿಗಳ ಗಮನ ಸೆಳೆದಿದ್ದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲವೆಂದು ಸಂಪತ್ ಕುಮಾರ್ ಆರೋಪಿಸಿದರು.

ಕೊಡಗು ಜಿಲ್ಲಾ ಪ್ರವಾಸಿಗರ ವಾಹನ ಮಾಲೀಕರ ಮತ್ತು ಚಾಲಕರ ಸಂಘದ ಉಪಾಧ್ಯಕ್ಷರಾದ ರಫೀಕ್ ಮಾತನಾಡಿ ಭಾಗಮಂಡಲದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ಚಾಲಕರು ಹರಸಹಾಸ ಪಡುವಂತ್ತಾಗಿದೆ. ಮಳೆಗಾಲಕ್ಕೂ ಮೊದಲೆ ರಸ್ತೆ ದುರಸ್ತಿ ಪಡಿಸಬೇಕಾಗಿದ್ದ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದ ಪರಿಣಾಮ ಇಂದು ಚಾಲಕರು ಕಷ್ಟ ಅನುಭವಿಸುವಂತ್ತಾಗಿದೆ ಎಂದು ಟೀಕಿಸಿದರು. ನಿಗಧಿತ ಸಮಯದಲ್ಲಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳದಿದ್ದಲ್ಲಿ ಭಾಗಮಂಡಲ ರಸ್ತೆತಡೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಸಂಘದ ಖಜಾಂಚಿ ವಸಂತ, ಪ್ರಧಾನ ಕಾರ್ಯದರ್ಶಿ ಬಿ.ಸಿ.ರಾಜು, ಸಹ ಕಾರ್ಯದರ್ಶಿ ಉಮೇಶ್ ಹಾಗೂ ಸದಸ್ಯ ರಶೀದ್ ಉಪಸ್ಥಿತರಿದ್ದರು.  (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: