ಕರ್ನಾಟಕ

ಹೊರ ರಾಜ್ಯದಿಂದ ಬಂದಿರುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ದೂರು

ಸೋಮವಾರಪೇಟೆ, ಅ.10: ಹೊರ ರಾಜ್ಯದಿಂದ ಬಂದಿರುವ ಸಮಾಜಘಾತಕ ಶಕ್ತಿಗಳು, ಕ್ರಿಮಿನಲ್ ಚಟುವಟಿಕೆಯೊಂದಿಗೆ ಇಲ್ಲಿನ ಮೂಲ ನಿವಾಸಿಗಳ ಮೇಲೆ ಹಲ್ಲೆ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ, ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಪಟ್ಟಣದ ವಿವಿಧ ಸಂಘಟನೆಗಳ ಸದಸ್ಯರು ಪೊಲೀಸ್ ಠಾಣೆಗೆ ತೆರಳಿ, ಠಾಣಾಧಿಕಾರಿ ಶಿವಣ್ಣ ಅವರ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದರು.

ತಾಲೂಕು ಒಕ್ಕಲಿಗರ ವೇದಿಕೆ, ಗೌಡಸೇನೆ ಹಾಗೂ ಜಯಕರ್ನಾಟಕ ಸಂಘಟನೆಗಳ ನೇತೃತ್ವದಲ್ಲಿ ತೆರಳಿದ ಯುವಕರು, ತಾಲೂಕಿನಲ್ಲಿ ಬಹುಸಂಖ್ಯಾತರಾಗಿರುವ ಒಕ್ಕಲಿಗರ ಮೇಲೆ ಕೇರಳದಿಂದ ಬಂದಿರುವ ಕೆಲ ಪುಂಡರ ಗುಂಪು ಹಲ್ಲೆ ನಡೆಸುತ್ತಿದೆ ಎಂದು ಆರೋಪಿಸಿದರು. ಮೂಲನಿವಾಸಿ ಒಕ್ಕಲಿಗ ಜನಾಂಗದವರು, ಎಲ್ಲಾ ಜಾತಿ ಜನಾಂಗದವರನ್ನು ಗೌರವದಿಂದ ಕಾಣುತ್ತಾರೆ. ಕೇರಳ ರಾಜ್ಯದಿಂದ ಬಂದು ಐಗೂರಿನಲ್ಲಿ ಹಾಗು ಸೋಮವಾರಪೇಟೆ ಪಟ್ಟಣದಲ್ಲಿ ವಾಸವಿರುವ ಕೆಲ ಪುಂಡುರು, ಒಕ್ಕಲಿಗ ಜನಾಂಗದವರ ವಿರುದ್ಧ ಬಹಿರಂಗವಾಗಿ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಮುಂದೆ ಅನಾಹುತವಾಗುವುದರೊಳಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಒಕ್ಕಲಿಗರ ವೇದಿಕೆಯ ಗೌಡಳ್ಳಿ ಪೃಥ್ವಿ, ಕಿಬ್ಬೆಟ್ಟ ಮಧು ಒತ್ತಾಯಿಸಿದರು. ಭಾನುವಾರ ಪಟ್ಟಣದ ಒಕ್ಕಲಿಗರ ಭವನದಲ್ಲಿ ನಡೆದ ಓಣಂ ಉತ್ಸವದಲ್ಲಿ ಪಾಲ್ಗೊಂಡು, ರಾತ್ರಿಯಾಗುತ್ತಿದ್ದಂತೆ ಕೆಲ ಪುಂಡರು ಮದ್ಯಸೇವಿಸಿ ಕಕ್ಕೆಹೊಳೆ ಸಮೀಪ ಒಕ್ಕಲಿಗರ ಜನಾಂಗದ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆ ಮತ್ತು ತಾಲೂಕಿನಲ್ಲಿ ಎಲ್ಲಾ ಜಾತಿ ಜನಾಂಗದವರು ಅನ್ಯೋನ್ಯವಾಗಿ ಬದುಕುತ್ತಿದ್ದಾರೆ. ಹೊರ ರಾಜ್ಯದ ಕೆಲವರು ಶಿವಾಜಿ ಸೇನೆಯ ಹೆಸರಿನಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿ ಆಶಾಂತಿಯನ್ನು ಸೃಷ್ಠಿಸುತ್ತಿದ್ದಾರೆ. ಕ್ರಿಮಿನಲ್‍ಗಳ ವಿರುದ್ಧ ಈಗಾಗಲೇ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆಗಳು ದಾಖಲಾಗಿವೆ. ಶಿವಾಜಿ ಸೇನೆಯನ್ನು ಕೂಡಲೆ ನಿಷೇಧಿಸಬೇಕು ಎಂದು ಜಯಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಸುರೇಶ್ ಶೆಟ್ಟಿ ಆಗ್ರಹಿಸಿದರು. ಐಗೂರಿನಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ನಡೆಯುತ್ತಿದೆ. ಮರಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಕೂಲಿಗೆ ಬಂದವರು ಕೆಲವರು ಮಾಲಿಕರ ಮೇಲೆ ಹಲ್ಲೆ ಯತ್ನಿಸುತ್ತಿರುವ ಘಟನೆಗಳು ನಡೆಯುತ್ತಿವೆ ಎಂದು ಕಿರಗಂದೂರು ನಿತೀನ್ ಆರೋಪಿಸಿದರು.

ಈ ಸಂದರ್ಭ ಒಕ್ಕಲಿಗರ ವೇದಿಕೆಯ ನತೀಶ್ ಮಂದಣ್ಣ, ಮಸಗೋಡು ಸತೀಶ್, ಗಾಂಧಿ, ಮಧು, ರುದ್ರಪ್ಪ, ಮಧು, ಚಕ್ರವರ್ತಿ ಸುರೇಶ್, ಮಸಗೋಡು ದಯಾನಂದ್, ಹಾನಗಲ್ ಮಿಥುನ್, ಐಗೂರು ಗ್ರಾಪಂ ಮಾಜಿ ಅಧ್ಯಕ್ಷ ಕೆ.ಪಿ.ರಾಯ್ ಮತ್ತಿತರರು ಇದ್ದರು.ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗುವವರನ್ನು ಮಟ್ಟಹಾಕುವುದು ಪೊಲೀಸ್ ಇಲಾಖೆಗೆ ಗೊತ್ತಿದೆ. ಸಮಾಜಘಾತಕ ಶಕ್ತಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು. ಐಗೂರಿನಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಕಳೆದ ಬಾರಿ ಪಟ್ಟಣದಲ್ಲಿ ನಡೆದ ಓಣಂ ಮೆರವಣಿಗೆ ಹಾಗು ಉತ್ಸವ ಶಾಂತ ರೀತಿಯಲ್ಲಿ ನಡೆದಿತ್ತು. ಭಾನುವಾರ ನಡೆದ ಓಣಂ ಉತ್ಸವವಕ್ಕೂ ರಾತ್ರಿ ನಡೆದ ಗಲಾಟೆಗೂ ಸಂಬಂಧವಿದೆಯೇ ಎಂಬುದರ ಬಗ್ಗೆ ತನಿಖೆ ಕೈಗೊಳ್ಳಲಾಗುವುದು ಎಂದು ಠಾಣಾಧಿಕಾರಿ ಶಿವಣ್ಣ ಹೇಳಿದರು. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: