ಕರ್ನಾಟಕ

ನಾಡ ಕಚೇರಿಯಲ್ಲಿ ದಲಿತ ಅಧಿಕಾರಿಗಳ ಮೇಲೆ ದೌರ್ಜನ್ಯ: ಡಿ.ಜೆ.ಈರಪ್ಪ ಆರೋಪ

ಸೋಮವಾರಪೇಟೆ, ಅ.10: ಶನಿವಾರಸಂತೆ ನಾಡಕಚೇರಿ ವಿರುದ್ಧ ಕೆಲ ದಲಿತ ಸಂಘಟನೆಯ ಮುಖಂಡರು ಭ್ರಷ್ಟಾಚಾರದ ಆರೋಪ ಮಾಡಿದ್ದು, ಇದರಲ್ಲಿ ಯಾವದೇ ಹುರುಳಿಲ್ಲ ಎಂದು ದಸಂಸ ಜಿಲ್ಲಾ ಸಂಚಾಲಕ ಡಿ.ಜೆ. ಈರಪ್ಪ ತಿಳಿಸಿದ್ದಾರೆ.

ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಕಚೇರಿಯ ಇರುದ್ಧ ಆರೋಪ ಮಾಡಿರುವ ಡಿ.ಎಸ್. ನಿರ್ವಾಣಪ್ಪ ಮತ್ತು ಜಯಮ್ಮ ಅವರು ಶನಿವಾರಸಂತೆ ನಾಡ ಕಚೇರಿ ವ್ಯಾಪ್ತಿಗೆ ಒಳಪಡುವದಿಲ್ಲ. ಆದರೂ ಆರೋಪ ಮಾಡುತ್ತಿರುವದು ತಮ್ಮ ಸ್ವಾರ್ಥ ಸಾಧನೆಯನ್ನು ತೋರಿಸುತ್ತದೆ ಎಂದರು. ಈ ಹಿಂದೆ ನಾಡಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಇವರುಗಳು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ ಸಾರ್ವಜನಿಕರೇ ವಿರೋಧ ವ್ಯಕ್ತಪಡಿಸಿದ್ದರು. ಭಾರೀ ವಿರೋಧ ಎದುರಾದ ಸಂದರ್ಭ ಸ್ಥಳದಿಂದ ಕಾಲ್ಕಿತ್ತಿದ್ದರು. ಇದೀಗ ಸಭೆಗಳಲ್ಲಿ ಇಂತಹ ಆರೋಪ ಮಾಡುತ್ತಿದ್ದಾರೆ. ಒಂದು ವೇಳೆ ಅಧಿಕಾರಿಗಳು ಲಂಚ ಪಡೆಯುತ್ತಿದ್ದರೆ ಎಸಿಬಿ ಗೆ ದೂರು ನೀಡಲಿ. ಇವರುಗಳ ಆರೋಪದಿಂದ ಸಾರ್ವಜನಿಕರ ಕೆಲಸ ಕಾರ್ಯಗಳೂ ನಡೆಯುತ್ತಿಲ್ಲ ಎಂದು ದೂರಿದರು.

ವೃಥಾ ಆರೋಪ ಮಾಡುತ್ತಿರುವ ನಿರ್ವಾಣಪ್ಪ ಅವರ ಆದಾಯದ ಮೂಲದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪತ್ತೆ ಹಚ್ಚಬೇಕು. ಈ ಬಾರಿ ದೂರು ನೀಡಲಾಗುವುದು. ನಾಡ ಕಚೇರಿಯಲ್ಲಿ ದಲಿತ ಅಧಿಕಾರಿಗಳೇ ಹೆಚ್ಚು ಕೆಲಸ ಮಾಡುತ್ತಿದ್ದು, ಇವರುಗಳ ವಿರುದ್ಧವೇ ಆರೋಪ ಮಾಡುವ ಮೂಲಕ ದಲಿತರ ಮೇಲೆಯೇ ದೌರ್ಜನ್ಯಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು. ಗೋಷ್ಠಿಯಲ್ಲಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣದ ಯುವ ಘಟಕಾಧ್ಯಕ್ಷ ಫ್ರಾನ್ಸಿಸ್ ಡಿಸೋಜ ಮಾತನಾಡಿ, ಒಂದು ವೇಳೆ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದೇ ಆದಲ್ಲಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಕೊಡಲಿ. ಸೂಕ್ತ ದಾಖಲೆಗಳೊಂದಿಗೆ ಹೋರಾಟಕ್ಕೆ ಇಳಿದರೆ ನಮ್ಮ ಸಂಘಟನೆಯೂ ಕೈಜೋಡಿಸಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕರವೇ ಶನಿವಾರಸಂತೆ ಹೋಬಳಿ ಅಧ್ಯಕ್ಷ ಎನ್.ಡಿ. ಆನಂದ, ರಾಮೇನಹಳ್ಳಿ ಗ್ರಾಮಾಧ್ಯಕ್ಷ ಪ್ರವೀಣ್‍ಕುಮಾರ್, ಮೆಣಸ ಗ್ರಾಮದ ರಂಗಶೆಟ್ಟಿ, ಮಹೇಶ್, ಶನಿವಾರಸಂತೆಯ ವೀರಭದ್ರ ಅವರುಗಳು ಉಪಸ್ಥಿತರಿದ್ದರು. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: