ಮೈಸೂರು

ವಿದ್ಯಾರ್ಥಿಗಳು ಸಂವಹನ ಕೌಶಲ್ಯದಿಂದ ತಮ್ಮ ವ್ಯಕ್ತಿತ್ವ ರೂಪಸಿಕೊಳ್ಳುವುದು ಅನಿವಾರ್ಯ : ಡಾ. ನಿರಂಜನ ವಾನಳ್ಳಿ

ಮೈಸೂರು,ಅ.10:- ಇಂದು ಸ್ಪರ್ಧಾತ್ಮಕ ಯುಗವಾಗಿದ್ದು  ವಿದ್ಯಾರ್ಥಿಗಳು ಸಂವಹನ ಕೌಶಲ್ಯದಿಂದ ತಮ್ಮ ವ್ಯಕ್ತಿತ್ವ ರೂಪಸಿಕೊಳ್ಳುವುದು ಅನಿವಾರ್ಯ ಎಂದು ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಸಚಿವ ಡಾ. ನಿರಂಜನ ವಾನಳ್ಳಿ ತಿಳಿಸಿದರು.

ಮಂಗಳವಾರ ಜಯಲಕ್ಷ್ಮಿಪುರಂನಲ್ಲಿರುವ ಸಂತ ಜೋಸೆಫ್ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ ಮೈಸೂರು ಡಿಯೊಸೆಸನ್ ಎಜುಕೇಷನಲ್ ಸೊಸೈಟಿ, ಸಂತ ಜೋಸೆಫ್ ಪ್ರಥಮದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಳ್ಳಲಾದ ಮಾಧ್ಯಮದಲ್ಲಿ ಪರಿಣಾಮಕಾರಿ ಸಂವಹನ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು. ನಮ್ಮ ದಿನನಿತ್ಯದ ಜೀವನಕ್ಕೆ ನಮ್ಮ ವೃತ್ತಿ ಬದುಕಿಗೆ ಎಲ್ಲದಕ್ಕೂ ಸಂವಹನ ಬೇಕು. ಜನ್ಮಜಾತವಾಗಿ ಎಲ್ಲರಿಗೂ ಈ ಕಲೆ ಕರಗತವಾಗಿರುವುದಿಲ್ಲ. ನಿರಂತರ ಸಾಧನೆ ಮತ್ತು ಪ್ರಯತ್ನದಿಂದ ಅದನ್ನು ಯಾರು ಬೇಕಾದರೂ ತಮ್ಮದಾಗಿಸಿಕೊಳ್ಳಬಹುದು. ಉದಾಹರಣೆಗೆ ಓರ್ವ ವಿಜ್ಞಾನಿ ಏನೆಲ್ಲವನ್ನು ಕಂಡು ಹಿಡಿಯುತ್ತಾನೆ ಆದರೆ ಅವನು ಕಂಡು ಹಿಡಿದಿರುವುದು ಪ್ರಪಂಚಕ್ಕೆ ತಿಳಿಯಬೇಕು ಅಂದರೆ ಅವನು ಸಂವಹನ ಮಾಡಲೇಬೇಕು. ಮಾಧ್ಯಮದ ಮೂಲಕ ಸಂವಹನ ನಡೆಸಿದಾಗ, ಅಥವಾ ಒಂದು ನಾಲ್ಕಾರು ಜನರ ಜೊತೆ ತಾನು ಕಂಡು ಹಿಡಿದಿರುವುದ ಕುರಿತು ಸಂವಹನ ನಡೆಸಿದಾಗ ಮಾತ್ರ ಅದು ತಿಳಿಯಲು ಸಾಧ್ಯ. ಸಂವಹನ ಗೊತ್ತಿಲ್ಲದಿದ್ದಲ್ಲಿ ಮಾಡಿದ ಪ್ರಯತ್ನವೆಲ್ಲವೂ ವ್ಯರ್ಥವಾಗಲಿದೆ ಎಂದರು. ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳು ಸಂವಹನ ನಡೆಸುತ್ತಿದ್ದರೆ ಮಾತ್ರ ಎಷ್ಟೋ ವಿಷಯಗಳನ್ನು ತಿಳಿದುಕೊಳ್ಳಬಹುದು. ಇಲ್ಲದಿದ್ದಲ್ಲಿ ನೀವು ತಿಳಿದುಕೊಂಡ ವಿಷಯವನ್ನು ಜಗತ್ತಿಗೆ ತಿಳಿಸಬಹುದು ಎಂದು ಹೇಳಿದರು.

ಮೈಸೂರು ಡಿಯೊಸೆಸನ್ ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ರೆ.ಫಾ. ವಿಜಯಕುಮಾರ್ ಮಾತನಾಡಿ ಇದೀಗ ಕಂಪ್ಯೂಟರ್ ಯುಗವಾಗಿದ್ದು, ಎಲ್ಲರ ಕೈಯ್ಯಲ್ಲಿಯೂ ಮೊಬೈಲ್ ಕಾಣಸಿಗುತ್ತಿದೆ. ಎಲ್ಲವೂ ಕೇವಲ ಸಂದೇಶಗಳಿಂದಲೇ ನಡೆಯುತ್ತಿದ್ದು ಮಾತನಾಡುವವರ ಸಂಖ್ಯೆಯೇ ಕಡಿಮೆಯಾಗುತ್ತಿದೆ. ಅಕ್ಕಪಕ್ಕದ ಮನೆಯವರ ಜೊತೆಯೂ ಮಾತಾಡಲ್ಲ, ಮಹಡಿಯ ಮೇಲೆ ಯಾರಾದರೂ ವಾಸವಿದ್ದರೆ ಅವರ ಜೊತೆಯೂ ಮಾತನಾಡಲ್ಲ. ಮಾತನಾಡುವುದನ್ನೇ ಮರೆಯುತ್ತಿದ್ದಾರೆ. ಸಂಬಂಧಿಕರು, ಸ್ನೇಹಿತರು ಯಾರೊಂದಿಗೂ ಮಾತಾಡಲ್ಲ. ಹೀಗಾದರೆ ಕಷ್ಟವಾಗಲಿದೆ. ಸಂವಹನ ನಡೆಸಬೇಕು. ಸದಾ ಯಾರ ಜೊತೆಯಲ್ಲಾದರೂ ಸಂವಹನ ನಡೆಸುತ್ತಿರಬೇಕು. ಸಂವಹನ ಕಲೆಯನ್ನು ಚೆನ್ನಾಗಿ ಅರಿತಿದ್ದರೆ ಉದ್ಯೋಗ ದೊರಕಿಸಿಕೊಳ್ಳಲು ಸಹಾಯವಾಗಲಿದೆ ಎಂದರು.

ಈ ಸಂದರ್ಭ ಸಂತ ಜೋಸೆಫ್ ಸಂಸ್ಥೆಗಳ ಪಾದ್ರಿ ರೆ.ಫಾ. ಪ್ರವೀಣ್ ಕುಮಾರ್, ಕಾಲೇಜು ಸಿಇಒ ಮಣಿ ಮ್ಯಾಥಿವ್, ಪ್ರಾಂಶುಪಾಲೆ ವಿ.ನಿವೇದಿತಾ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: