ದೇಶಪ್ರಮುಖ ಸುದ್ದಿ

ಬಿಹಾರ, ಒಡಿಶಾಗೆ ಚಂಡಮಾರುತ ಭೀತಿ : ದಕ್ಷಿಣಕ್ಕೂ ತಿರುಗಬಹುದು ಸುಳಿಗಾಳಿ

ನವದೆಹಲಿ (ಅ.10): ದೇಶದ ಪೂರ್ವ ಭಾಗದ ಸಮುದ್ರ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಬಿಹಾರ ಮತ್ತು ಒಡಿಶಾ ರಾಜ್ಯಗಳಿಗೆ ಪ್ರಬಲ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಮುಂದಿನ 48 ಗಂಟೆಗಳ ಅವಧಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಪಶ್ಚಿಮ ಬಂಗಾಳದ ಗಂಗಾನದಿ ಪ್ರದೇಶದಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ಚಂಡಮಾರುತ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಜನತೆ ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕೆಂದು ಈಗಾಗಲೇ ಎಚ್ಚರಿಕೆ ನೀಡಲಾಗಿದೆ.

ಪ್ರಮುಖವಾಗಿ ಈಶಾನ್ಯ ರಾಜ್ಯಗಳಿಗೆ, ಮಧ್ಯಮಹಾರಾಷ್ಟ್ರ, ಮರಾಠವಾಡ, ಕೊಂಕಣ ಮತ್ತು ಗೋವಾ, ತೆಲಂಗಾಣ, ರಾಯಲಸೀಮೆ, ಉತ್ತರ ಕರ್ನಾಟಕದ ಒಳನಾಡು ಮತ್ತು ತಮಿಳುನಾಡಿನಲ್ಲಿ ಭಾರಿ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಈ ತಿಂಗಳ 13 ರವರೆಗೂ ಅಂದರೆ ಮುಂದಿನ ನಾಲ್ಕು ದಿನ ಬಿರುಗಾಳಿ ಸಹಿತ ಭಾರೀ ಮಳೆ ಬೀಳಲಿದ್ದು, ತದನಂತರ ಚಂಡಮಾರುತ ನಿಧಾನವಾಗಿ ನೈರುತ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆ ಇದೆ. 24 ಗಂಟೆಗಳ ಬಳಿಕ ಉತ್ತರಾಭಿಮುಖವಾಗಿ ಸಂಚರಿಸಲಿರುವ ಮಾರುತ, ದೇಶದ ದಕ್ಷಿಣ ಮತ್ತು ಮಧ್ಯಭಾಗದ ರಾಜ್ಯಗಳಿಗೂ ವ್ಯಾಪಿಸಬಹುದು. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಮೀನುಗಾರರು ಮುಂದಿನ 24 ಗಂಟೆಗಳ ಕಾಲ ಸಮುದ್ರಕ್ಕೆ ಇಳಿಯಬಾರದು ಎಂದು ಇಲಾಖೆ ಎಚ್ಚರಿಸಿದೆ.

(ಎನ್‍ಬಿಎನ್‍)

Leave a Reply

comments

Related Articles

error: