ಮೈಸೂರು

ಮೈಸೂರಿನಲ್ಲಿ ಮತ್ತೆ ಹೆಚ್ಚಿದ ಸರಗಳ್ಳತನ: ವಿವಿಧೆಡೆ ಕಳ್ಳರ ಕೈಚಳಕ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸರಗಳ್ಳರ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು ಸಾರ್ವಜನಿಕರ ನಿದ್ದೆಗೆಡಿಸಿದೆ. ಶನಿವಾರ ಮತ್ತು ಭಾನುವಾರ ಸೇರಿದಂತೆ ಎರಡು ದಿನಗಳಲ್ಲಿ ನಗರದ ವಿವಿಧೆಡೆ  ಒಟ್ಟು ನಾಲ್ಕು ಮಹಿಳೆಯರ ಸರಗಳನ್ನು ದುಷ್ಕರ್ಮಿಗಳು ಅಪಹರಿಸಿದ್ದು ಮತ್ತೆ ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಆದರೆ ಒಂದು ಕಡೆ ಮಾತ್ರ ಅಸಲಿ ಅಂತ ತಿಳಿದು ಅಪಹರಿಸಿದ ಮಹಿಳೆಯೋರ್ವರ ಸರ ನಕಲಿಯಾಗಿದ್ದು, ಕಳ್ಳರಿಗೆ ಚೆನ್ನಾಗಿ ಪಾಠ ಕಲಿಸಿದಂತಾಗಿದೆ.

ಭಾನುವಾರ ಬೆಳಿಗ್ಗೆ ನಗರದ ಇಟ್ಟಿಗೆಗೂಡಿನ ನಿವಾಸಿ ರುಕ್ಮಿಣಿ (57) ಎಂಬವರು ತಮ್ಮ ಮನೆಯ ಮುಂದೆ ಮಗುವನ್ನು ಆಟ ಆಡಿಸುತ್ತಿದ್ದಾಗ ಪಲ್ಸರ್ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಅವರ ಕತ್ತಿನಲ್ಲಿದ್ದ 100 ಗ್ರಾಂ ಚಿನ್ನದ ಸರವನ್ನು ಅಪಹರಿಸಿದ್ದಾರೆ.

ಶನಿವಾರ ನಗರದ ರಾಘವೇಂದ್ರ ನಗರ ನಿವಾಸಿ ಮಂಜುಳಾ (48) ಎಂಬವರು ಕೇಂದ್ರೀಯ ವಿದ್ಯಾಲಯದ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು ಅವರ ಕತ್ತಿನಲ್ಲಿದ್ದ 45 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಪ್ರಕರಣ ಕುರಿತಂತೆ ನಜರಾಬಾದ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಭಾನುವಾರ ಬೆಳಿಗ್ಗೆ ನಗರದ ಕೃಷ್ಣಮೂರ್ತಿಪುರಂನ 1ನೇ ಕ್ರಾಸ್ ನಿವಾಸಿ ಸುಮಾ (52) ಎಂಬವರು ಮನೆಯ ಮುಂದೆ ಗಿಡದಿಂದ ಹೂವನ್ನು ಕಿತ್ತು ನಿಂತಿದ್ದರು. ಅದೇ ಸಮಯದಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ಇಲ್ಲಿ ಟ್ಯೂಷನ್ ಹೇಳಿ ಕೊಡುವ ಮನೆ ಯಾವುದು ಎಂದು ಹಿಂದಿಯಲ್ಲಿ ವಿಚಾರಿಸಿದ್ದಾರೆ. ಅವರು ತಿರುಗಿ ನೋಡುವಷ್ಟರಲ್ಲಿ ಅವರ ಕತ್ತಿನಲ್ಲಿದ್ದ 35 ಗ್ರಾಂ ತೂಕದ ಚಿನ್ನದ ಸರವನ್ನು ಎಗರಿಸಿದ್ದಾರೆ ಎನ್ನಲಾಗಿದೆ. ಪ್ರಕರಣ ಕುರಿತಂತೆ ಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಸಿಪಿ ರುದ್ರಮೂರ್ತಿ ಅವರು ಇದೀಗ ನಾಕಾಬಂದಿ ವಿಧಿಸಿದ್ದಾರೆ ಎನ್ನಲಾಗಿದೆ.

ಶನಿವಾರ ಸಾಯಂಕಾಲ ಶಾರದಾದೇವಿ ನಗರ ನಿವಾಸಿ ಸವಿತಾ (32) ಎಂಬವರು ಆಟೋದಲ್ಲಿ ತೆರಳುತ್ತಿದ್ದರು. ಅವರು ಆಟೋದಿಂದ ಇಳಿಯುತ್ತಿದ್ದಂತೆ ಅವರ  ಸರವನ್ನು ಕಳ್ಳರು ಕಸಿದು ಪರಾರಿಯಾಗಿದ್ದಾರೆ. ಆದರೆ ಸವಿತಾ ಅವರು ಧರಿಸಿದ್ದು ಚಿನ್ನದ ಸರವಾಗಿರದೇ ನಕಲಿ ಸರವಾಗಿತ್ತು. ಅದರಿಂದ ಠಾಣೆಯಲ್ಲಿ ದೂರು ದಾಖಲಿಸಿಲ್ಲ ಎಂದು ತಿಳಿದು ಬಂದಿದೆ.

Leave a Reply

comments

Related Articles

error: