ಕರ್ನಾಟಕ

ಅ.23-ನ.5 : ಕುಷ್ಠರೋಗ ಪ್ರಕರಣಗಳ ಪತ್ತೆ ಹಾಗೂ ವಿಶೇಷ ತಪಾಸಣಾ ಆಂದೋಲನ

ರಾಜ್ಯ (ಚಾಮರಾಜನಗರ)ಅ.10:- ಜಿಲ್ಲೆಯಲ್ಲಿ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ಕುಷ್ಠರೋಗ ಪ್ರಕರಣಗಳ ಪತ್ತೆ ಹಾಗೂ ವಿಶೇಷ ತಪಾಸಣಾ ಆಂದೋಲನವನ್ನು ಇದೇ ಅಕ್ಟೋಬರ್ 23 ರಿಂದ ನವೆಂಬರ್ 5ರವರೆಗೆ ಹಮ್ಮಿಕೊಳ್ಳುತ್ತಿದ್ದು ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಬಿ. ರಾಮು ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕುಷ್ಠರೋಗ ಪತ್ತೆ ಹಚ್ಚುವಿಕೆಗಾಗಿ ಜಿಲ್ಲಾದ್ಯಂತ ವ್ಯಾಪಕವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ದಿಸೆಯಲ್ಲಿ ಎಲ್ಲ ಅಧಿಕಾರಿಗಳು ವಿಶೇಷವಾಗಿ ಶ್ರಮಿಸಬೇಕು. ತಾಲೂಕು ಮಟ್ಟದಲ್ಲಿ ತಹಶೀಲ್ದಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕು ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ತಾಲೂಕು ಮಟ್ಟದ ಸಮನ್ವಯ ಸಭೆ ನಡೆಸಬೇಕು. ಅಕ್ಟೋಬರ್ 23 ರಿಂದ ಆರಂಭಿಸಬೇಕಿರುವ ಆಂದೋಲನಕ್ಕೆ ಸನ್ನದ್ಧರಾಗಬೇಕೆಂದು ತಿಳಿಸಿದರು. ಶಾಲೆಗಳಲ್ಲಿ ಪ್ರಾರ್ಥನಾ ಸಮಯದಲ್ಲಿ ಕುಷ್ಠರೋಗದ ಲಕ್ಷಣಗಳು ಹಾಗೂ ಇದಕ್ಕೆ ಲಭಿಸಲಿರುವ ಚಿಕಿತ್ಸೆ ಪರಿಹಾರ ಕ್ರಮಗಳ ಬಗ್ಗೆ ತಿಳಿವಳಿಕೆ ನೀಡಬೇಕು. ವಿದ್ಯಾರ್ಥಿಗಳಿಗೂ ತಪಾಸಣೆ ಮಾಡಬೇಕಿದೆ. ಹಾಸ್ಟೆಲ್ ವಸತಿ ಶಾಲೆಗಳಲ್ಲಿ ಸಹ ವ್ಯಾಪಕವಾಗಿ ಆರೋಗ್ಯ ತಪಾಸಣೆ ಮಾಡಬೇಕೆಂದು ತಿಳಿಸಿದರು. ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕಾದರೆ ಹೆಚ್ಚು ಪ್ರಚಾರ ಕಾರ್ಯಕ್ರಮಗಳಿಗೂ ಗಮನ ನೀಡಬೇಕು. ಕರಪತ್ರ, ಭಿತ್ತಿಪತ್ರಗಳನ್ನು ಮುದ್ರಿಸಿ ಜನರಿಗೆ ಚರ್ಮ ಆರೋಗ್ಯದ ಜಾಗೃತಿ ಮೂಡಿಸಬೇಕು. ಅತಿ ಸರಳವಾಗಿ ಮಾಹಿತಿ ಜನರನ್ನು ತಲುಪಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.

ಸಂದರ್ಭ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್. ಪ್ರಸಾದ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಅನಿಲ್ ಕುಮಾರ್, ಜಿಲ್ಲೆಯ ತಾಲೂಕುಗಳ ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. (ಆರ್.ವಿ.ಎಸ್,ಎಸ್.ಎಚ್)

Leave a Reply

comments

Related Articles

error: