ಪ್ರಮುಖ ಸುದ್ದಿಮೈಸೂರು

ಅಂತರಂಗದ ಭಾವ ಅಕ್ಷರ ರೂಪದ ಬ್ರಹ್ಮಾಸ್ತ್ರದಿಂದ ಗೋಹತ್ಯೆಯ ಅಸುರನ ನಿಗ್ರಹವಾಗಲಿದೆ : ರಾಘವೇಶ್ವರ ಶ್ರೀ

ಮೈಸೂರು,ಅ.10:- ದೇವರ ಅಂತರಂಗಗಳು ಸೇರಿ ದೇವಜಾತೆಯ ಜನನವಾಗಿ ಮಹಿಷಾಸುರ ಮರ್ದನವಾಯಿತು. ಅಂತೆಯೇ ಜನರ ಅಂತರಂಗದ ಭಾವ ಅಕ್ಷರರೂಪ ತಾಳಿ ಬ್ರಹ್ಮಾಸ್ತ್ರವಾಗಿ ಗೋಹತ್ಯೆ ಎಂಬ ಅಸುರನನ್ನು ನಿಗ್ರಹಿಸಲಿದೆ ಎಂದು ಹೊಸನಗರದ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಯವರು ತಿಳಿಸಿದರು.

ನಗರದ ಸರಸ್ವತಿಪುರಂನಲ್ಲಿರುವ  ವಿಜಯವಿಠಲ ಶಿಕ್ಷಣ ಸಂಸ್ಥೆ ಆವರಣದ ವಿಶ್ವೇಶತೀರ್ಥ ಮಂಟಪದಲ್ಲಿ ಮೈಸೂರು ಜಿಲ್ಲಾ ಗೋ ಪರಿವಾರದ ಮಾರ್ಗದರ್ಶನ ಸಭೆಯಲ್ಲಿ ಆಶೀರ್ವಚನ ನೀಡಿದರು. ದೇವರೆಲ್ಲ ಕೂಡಾ ಒಬ್ಬೊಬ್ಬರಾಗಿ ಹೋರಾಡಿದಾಗ ಮಹಿಷಾಸುರ ಮರ್ದನ ಸಾಧ್ಯವಾಗಲಿಲ್ಲ. ಎಲ್ಲರ ಅಂತರಂಗಗಳು ಸೇರಿ, ಆರ್ವೀಭವಿಸಿದ ದೇವಜಾತೆ ಮಹಿಷಾಸುರನನ್ನು ಮರ್ದಿಸಿದಳು. ಸ್ವಾತಂತ್ರ್ಯ ಬಂದ ಬಳಿಕ ದೇಶದಲ್ಲಿ ಗೋಹತ್ಯೆ ಹೆಚ್ಚಿದೆ. ಅದರ ವಿರುದ್ಧ ಸಂಘಟಿತ ಹೋರಾಟ ನಡೆಯದಿರುವುದೇ ಇದಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ಜನರ ಭಾವನೆಗಳನ್ನು ಕ್ರೋಢೀಕರಿಸಿ, ಆಳುವ ವರ್ಗಕ್ಕೆ ತಲುಪಿಸಿದಾಗ ಗೋಹತ್ಯೆ ನಿಷೇಧ ಸಾಧ್ಯವಾಗಬಹುದು ಎಂದು ವಿಶ್ಲೇಷಿಸಿದರು. ಸುಭಾಸ್‍ಚಂದ್ರ ಬೋಸರು ನಮಗೆ ರಕ್ತ ಕೊಡಿ; ನಾವು ಸ್ವಾತಂತ್ರ್ಯ ಕೊಡಿಸುತ್ತೇವೆ ಎಂದಿದ್ದರು. ಆದರೆ ನಮಗೆ ಕೇವಲ ಹಸ್ತಾಕ್ಷರ ನೀಡಿ.ನಾವು ಗೋಹತ್ಯೆ ನಿಷೇಧ ಜಾರಿಗೊಳಿಸುತ್ತೇವೆ ಎಂದರು. ಅಭಯಾಕ್ಷರ ಅರ್ಜಿಗಳು ಪ್ರತಿ ಮನೆ- ಮನಗಳನ್ನು ತಲುಪಬೇಕಿದೆ. ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ವ್ಯವಸ್ಥಿತವಾಗಿ ಸಹಿ ಸಂಗ್ರಹಿಸಲು ತಾಲೂಕು, ಗ್ರಾಮ ಗೋ ಪರಿವಾರಗಳು ಶ್ರಮಿಸಬೇಕು ಎಂದು ಸೂಚಿಸಿದರು.

ರಾಮಮಂದಿರ ನಿರ್ಮಾಣಕ್ಕೆ ಹಳ್ಳಿಹಳ್ಳಿಯಿಂದ ಇಟ್ಟಿಗೆ ಸಾಗಿದಂತೆ, ಗೋಮಾತೆಯ ರಕ್ಷಣೆಗಾಗಿ ಸಂಗ್ರಹಿಸಿದ ಅಭಯಾಕ್ಷರದ ಭವ್ಯ ಮೆರವಣಿಗೆ ಗೋಯಾತ್ರೆ ಸಂದರ್ಭದಲ್ಲಿ ನಡೆಯಲಿದೆ ಎಂದು ವಿವರಿಸಿದರು. ಪ್ರತಿಯೊಬ್ಬರ ಹೃದಯದಲ್ಲೂ ಗೋಮಾತೆಯ ಬಗ್ಗೆ ಅಪಾರ ಪ್ರೀತಿ ಇದೆ. ಇದನ್ನು ಅಭಿವ್ಯಕ್ತಗೊಳಿಸುವ ಕಾರ್ಯ ಅಭಯಾಕ್ಷರದ ಮೂಲಕ ಆಗುತ್ತಿದೆ ಎಂದು ಹೇಳಿದರು.

ಗೋವಿಗಾಗಿ ದುಡಿಯುವವರು, ಗೋವಿಗಾಗಿ ಮಡಿಯಲೂ ಸಿದ್ಧವಿರುವವರು ನಮ್ಮ ಬಂಧುಗಳು. ಅಭಯಾಕ್ಷರ ಅರ್ಜಿಯನ್ನು ಪ್ರತಿಮನೆಮನೆಗೆ ತಲುಪಿಸುವುದು ಗೋಕಿಂಕರರ ಕೆಲಸ. ಅದನ್ನು ಆಳುವ ವರ್ಗಕ್ಕೆ ತಲುಪಿಸುವುದು ನಮ್ಮ ಜವಾಬ್ದಾರಿ. ಗೋಪ್ರೇಮ ಇರುವ ಎಲ್ಲರೂ ಇದಕ್ಕೆ ಶಕ್ತಿಮೀರಿ ಶ್ರಮಿಸಬೇಕು. ಜಿಲ್ಲಾ, ತಾಲೂಕು ಹಾಗೂ ಗ್ರಾಮಮಟ್ಟದಲ್ಲಿ ಸಂಘಟನೆಯ ಜಾಲ ರೂಪುಗೊಳ್ಳಬೇಕು ಎಂದರು.

ಮೈಸೂರು ರಾಜವಂಶ ಗೋಸಂರಕ್ಷಣೆಗೆ ಅದ್ಭುತ ಕೊಡುಗೆ ನೀಡಿದೆ. ಆದರೆ ನಮ್ಮ ರಾಜಕಾರಣಿಗಳಿಗೆ ಇದರ ಅರಿವು ಇಲ್ಲ. ಒಂದು ಅಪೂರ್ವ ತಳಿಯನ್ನು ವಿಶ್ವಕ್ಕೆ ಪರಿಚಯಿಸಿದ್ದಲ್ಲದೇ, 12 ಸಾವಿರ ಎಕರೆ ಪ್ರದೇಶವನ್ನು ಅಮೃತಮಹಲ್ ಕಾವಲ್ ಆಗಿ ಮೀಸಲಿರಿಸಿದ್ದರು. ಗೋಗ್ರಾಸ ನೀಡಿ ಗಂಟೆ ಬಡಿದ ಬಳಿಕವಷ್ಟೇ ಕೃಷ್ಣರಾಜೇಂದ್ರ ಒಡೆಯರ್ ಊಟ ಮಾಡುತ್ತಿದ್ದರು. ಇಂಥ ಪರಂಪರೆಯ ಮೈಸೂರಿನಲ್ಲಿ ಅಭಯಾಕ್ಷರ ಅಭಿಯಾನ ಯಶಸ್ವಿಯಾಗಬೇಕು ಎಂದು ಸೂಚಿಸಿದರು.

ಭಾರತೀಯ ಗೋ ಪರಿವಾರದ ಕರ್ನಾಟಕ ರಾಜ್ಯ ಅಧ್ಯಕ್ಷ ಪಾಂಡುರಂಗ ಮಹಾರಾಜ್, ಡಾ.ಭಾನುಪ್ರಕಾಶ್ ಪಂಡಿತ್ ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: