ಕರ್ನಾಟಕಪ್ರಮುಖ ಸುದ್ದಿ

ಮಲೆನಾಡು ಭಾಗವನ್ನು ಪ್ರತಿನಿಧಿಸುವವರೆ ಅರಣ್ಯ ಸಚಿವರಾದರೆ ಮಾತ್ರ, ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ : ಪ್ರತಾಪ್ ಸಿಂಹ

ರಾಜ್ಯ(ಮಡಿಕೇರಿ)ಅ.11:-  ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿರುವ ಸೂಕ್ಷ್ಮ ಪರಿಸರ ತಾಣದ ಸಮಸ್ಯೆಯನ್ನು ನನ್ನ ಹೆಗಲಿನಲ್ಲೇ ಉಳಿಸಿಕೊಂಡು ಬಗೆಹರಿಸುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಭರವಸೆ ನೀಡಿದರು.

ಸೋಮವಾರಪೇಟೆ ತಾಲೂಕು ಕಾಫಿ ಬೆಳೆಗಾರರ ಸಂಘದ ಆಶ್ರಯದಲ್ಲಿ ಒಕ್ಕಲಿಗರ ಸಮುದಾಯಭವನದಲ್ಲಿ ಆಯೋಜಿಸಲಾಗಿದ್ದ ಕಾಫಿ ಬೆಳೆಗಾರರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ಜಿಲ್ಲೆಯ ಜನರು ಆತಂಕಪಡುವ ಅಗತ್ಯವಿಲ್ಲ. ಈ ಸಣ್ಣ ಸಮಸ್ಯೆಯನ್ನು ಕೆಲ ರಾಜಕಾರಣಿಗಳು ಭೂತದಂತೆ ಬಿಂಬಿಸಿ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂಷಿಸಿದರು. ಕೊಡಗು ಜಿಲ್ಲೆ ಚಿಕ್ಕದಾದರೂ, ರಾಜಕೀಯದ ವಿಷಯದಲ್ಲಿ ಬಹುದೊಡ್ಡ ಜಿಲ್ಲೆಯಾಗಿದೆ. ಸೂಕ್ಷ್ಮ ಪರಿಸರ ತಾಣದ ಸಮಸ್ಯೆಯನ್ನು ನನ್ನ ಹೆಗಲಿಗೆ ಹಾಕಿಕೊಂಡಿದ್ದೇನೆ. ಇದನ್ನು ಇಳಿಸುವ ಪ್ರಶ್ನೆಯೇ ಇಲ್ಲ. ನಾನು ಸಂಸದನಾಗಿ ಮೂರು ವರ್ಷ ಕಳೆದಿದೆ. ಸೂಕ್ಷ್ಮ ಪರಿಸರ ವಲಯ ಘೋಷಣೆಯಿಂದ ಯಾರಿಗಾದರೂ ಸಮಸ್ಯೆಯಾಗಿದೆಯೆ ಎಂದು ಪ್ರಶ್ನಿಸಿದರು. ಜಿಲ್ಲೆಯ ನಿವಾಸಿಗಳು ಆತಂಕಪಡುವ ಅಗತ್ಯವಿಲ್ಲ. ಕಸ್ತೂರಿ ರಂಗನ್ ವರದಿ ಅನುಷ್ಠಾನದಿಂದ ಕಲ್ಲು ಹಾಗೂ ಮರಳು ಗಣಿಗಾರಿಕೆ ಮಾಡುವಂತಿಲ್ಲ. ದೊಡ್ಡ ಮಟ್ಟದ ಜಲವಿದ್ಯುತ್ ಯೋಜನೆ ನಿಷೇಧವಿರುತ್ತದೆ. ಉಳಿದಂತೆ ಕೃಷಿಕರಿಗೆ ದೊಡ್ಡಮಟ್ಟದ ಸಮಸ್ಯೆ ಇರುವುದಿಲ್ಲ ಎಂದು ಹೇಳಿದರು.

ಕರ್ನಾಟಕದ ಕಾಫಿ ಜಾಗತಿಕ ಮಟ್ಟದಲ್ಲಿ ಹೆಸರು ಪಡೆದಿದೆ. ಹೀಗಿರುವಾಗ ಉತ್ಕೃಷ್ಟ ದರ್ಜೆಯ ಕಾಫಿ ತಯಾರಾಗಬೇಕು. ಕೇಂದ್ರ ಸಚಿವರಾದ ನಿರ್ಮಲ ಸೀತಾರಾಮನ್ ವಾಣಿಜ್ಯ ಸಚಿವರಾಗಿದ್ದ ಸಂದರ್ಭ ಭಾರತೀಯ ಸೇನೆಯಲ್ಲಿ ಕಾಫಿಯ ಬಳಕೆಗೆ ಹೆಚ್ಚಿನ ಉತ್ತೇಜನ ನೀಡಬೇಕೆಂದು ಮನವಿ ಮಾಡಲಾಗಿದೆ.  ರಾಜ್ಯದಲ್ಲಿ ಯಾವುದೇ ಸರ್ಕಾರವೂ ಅಧಿಕಾರಕ್ಕೆ ಬಂದರೂ ಮಲೆನಾಡು ಭಾಗವನ್ನು ಪ್ರತಿನಿಧಿಸುವವರೆ ಅರಣ್ಯ ಸಚಿವರಾದರೆ ಮಾತ್ರ, ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂದು ಆಶಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: