ಮೈಸೂರು

ಹಿಂದೂ ಸಾಮಾಜಿಕ ಕಾರ್ಯಕರ್ತರ ಮೇಲಿನ ದಬ್ಬಾಳಿಕೆ ಖಂಡಿಸಿ ಪ್ರತಿಭಟನೆ

ಮೈಸೂರು,ಅ.11-ಹಿಂದೂ ಸಾಮಾಜಿಕ ಕಾರ್ಯಕರ್ತರ ಮೇಲೆ ನಡೆದಿರುವ ಸರ್ಕಾರಿ ಪ್ರಾಯೋಜಿತ ದಬ್ಬಾಳಿಕೆ, ದೌರ್ಜನ್ಯ ಹಾಗೂ ಕಿರುಕುಳ ಹಾಗೂ ಹಿಂದೂ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳನ್ನು ಹತ್ತಿಕ್ಕುವ ರಾಜ್ಯ ಸರ್ಕಾರದ ಕೆಲವು ಅಧಿಕಾರಿಗಳ ಅತಿರೇಕದ ವರ್ತನೆ ಕುರಿತು ತನಿಖೆ ಹಾಗೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆ ಹಾಗೂ ವಿಶ್ವ ಹಿಂದು ಪರಿಷದ್ ನವರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಸಮಾವೇಶಗೊಂಡ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಉದ್ದೇಶ ಪೂರ್ವಕವಾಗಿ, ಅನಾವಶ್ಯಕವಾಗಿ ಬಹುಸಂಖ್ಯಾತ ಹಿಂದುಗಳ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಿಗೆ ಅಡ್ಡಿಯನ್ನುಂಟು ಮಾಡುತ್ತಿದೆ ಹಾಗೂ ನಿರ್ಬಂಧವನ್ನು ಹಾಕುತ್ತಿದೆ. ಅಲ್ಲದೆ, ನಿರಪರಾಧಿ ಹಿಂದು ಸಾಮಾಜಿಕ ಕಾರ್ಯಕರ್ತರನ್ನು ಹಿಂಸಿಸುವ, ಕಿರುಕುಳ ನೀಡುವ, ದೌರ್ಜನ್ಯ ಎಸಗುವ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿದೆ ಎಂದು ಆರೋಪಿಸಿದರು.

ಇಂತಹ ಕೃತ್ಯವನ್ನು ಎಸಗಿ, ಹಿಂದುಗಳ ಹಕ್ಕನ್ನು ಕಸಿಯುವ, ಹಿಂದುಗಳ ಸ್ವಾತಂತ್ರ್ಯವನ್ನು ಹರಣ ಮಾಡುವ, ಸರ್ಕಾರ ಹಾಗೂ ನಿರ್ದಿಷ್ಟ ಅಧಿಕಾರಿಗಳ ಮೇಲೆ ಕಾನೂನು ಕ್ರಮಕೈಗೊಂಡು ಬಹು ಸಂಖ್ಯಾತ ಹಿಂದೂಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ರಾಜ್ಯಪಾಲರಿಗೆ ಬರೆದಿರುವ ಆಗ್ರಹ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮೈಸೂರು ಜಿಲ್ಲಾ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಯೋಜಕ ಎಸ್.ಗಜೇಂದ್ರ, ವಿಭಾಗ ಸಂಘಟನಾ ಕಾರ್ಯದರ್ಶಿ ಅನಂತ್ ಕನ್ಯಾನ, ಕಾರ್ಯದರ್ಶಿ ಡಾ.ಮಂಜುನಾಥ್ ಸಿಂಗ್, ಖಜಾಂಚಿ ಗಿರೀಶ್, ರಾಜ್ಯ ಬಿಜೆಪಿ ಹಿಂದುಗಳಿದ ವರ್ಗಗಳ ಕಾರ್ಯದರ್ಶಿ ಬಿ.ಎಂ.ನಟರಾಜ್, ಎಚ್.ಜಿ.ಗಿರಿಧರ್, ಡಿ.ಟಿ.ರಾಘವೇಂದ್ರ ಇತರರು ಭಾಗವಹಿಸಿದ್ದರು. (ವರದಿ-ಹೆಚ್.ಎನ್, ಎಂ.ಎನ್)

 

 

Leave a Reply

comments

Related Articles

error: