ಸುದ್ದಿ ಸಂಕ್ಷಿಪ್ತ
ಅಂಚೆ ಇಲಾಖೆಯಿಂದ ವಿಶೇಷ ಕಾರ್ಯಕ್ರಮ
ಚಾಮರಾಜನಗರ, ಅ. 11: – ಅಂಚೆ ಇಲಾಖೆಯು ಪೋಸ್ಟ್ ಆಫೀಸ್ ಸೇವಿಂಗ್ಸ್ ಬ್ಯಾಂಕ್ ಖಾತೆಗಳಿಗೆ ಆಧಾರ್, ಮೊಬೈಲ್, ಪ್ಯಾನ್ ಸಂಖ್ಯೆಗಳನ್ನು ಜೋಡಿಸಲು ಒಪ್ಪಿಗೆ ಪತ್ರ ಪಡೆಯುವ ಪ್ರಕ್ರಿಯೆಯಲ್ಲಿ ತೊಡಗಿದೆ. ಆಧಾರ್, ಮೊಬೈಲ್, ಪ್ಯಾನ್ ಸಂಖ್ಯೆಗಳನ್ನು ಪೋಸ್ಟ್ ಆಫೀಸ್ ಸೇವಿಂಗ್ಸ್ ಬ್ಯಾಂಕ್ ಖಾತೆಗಳಿಗೆ ಜೋಡಿಸುವ ಕಾರ್ಯವನ್ನು ಪೂರ್ಣಗೊಳಿಸಲು ಇದೇ ಅಕ್ಟೋಬರ್ ತಿಂಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.
ಪೋಸ್ಟ್ ಆಫೀಸ್ ಸೇವಿಂಗ್ಸ್ ಬ್ಯಾಂಕಿನ ಎಲ್ಲಾ ಗ್ರಾಹಕರು ತಮ್ಮ ಖಾತೆಗಳನ್ನು ತೆರೆದಿರುವ ಪೋಸ್ಟ್ ಆಫೀಸುಗಳಿಗೆ ಆಧಾರ್ ಪ್ರತಿಯೊಂದಿಗೆ ಭೇಟಿ ನೀಡಿ ಆಧಾರ್, ಮೊಬೈಲ್, ಪ್ಯಾನ್ ಸಂಖ್ಯೆಗಳ ಮಾಹಿತಿಯನ್ನು ನಿಗದಿತ ಒಪ್ಪಿಗೆ ಪತ್ರದಲ್ಲಿ ನೀಡಲು ಕೋರಲಾಗಿದೆ. ಇದರ ಜತೆ ಆಧಾರ್ ಸಂಪರ್ಕಿತ ಖಾತೆಯೊಂದಿಗೆ ಅಥವಾ ಗ್ರಾಹಕ ಮಾಹಿತಿ ಫಾರಂನಲ್ಲಿ (ಸಿಐಎಫ್) ತಮ್ಮ ಹೆಸರಿನಲ್ಲಿರುವ ಅಂಚೆ ಇಲಾಖೆಯ ಇತರೆ ಉಳಿತಾಯ ಖಾತೆಗಳನ್ನು ಸಹ ಜೋಡಿಸಲು ಅಂಚೆ ಇಲಾಖೆಯ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಪ್ರಕಟಣೆಯಲ್ಲಿ ಕೋರಿದ್ದಾರೆ. (ಆರ್.ವಿ.ಎಸ್,ಎಸ್.ಎಚ್)