ಮೈಸೂರು

ಆನ್‌ಲೈನ್ ಬುಕಿಂಗ್: ಚಾಮುಂಡೇಶ್ವರಿ ದೇವಸ್ಥಾನ, ಅರಮನೆ ಪ್ರವೇಶಕ್ಕೆ ಉತ್ತಮ ಸ್ಪಂದನೆ

ಮೈಸೂರು, ಅ.೧೧: ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳಾದ ಚಾಮುಂಡೇಶ್ವರಿ ದೇವಸ್ಥಾನ ಮತ್ತು ಅರಮನೆ ಪ್ರವೇಶಕ್ಕೆ ಆನ್‌ಲೈನ್ ಬುಕಿಂಗ್ ಸೌಲಭ್ಯ ದೊರೆತಿರುವುದು ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಒದಗಿಸಿದ್ದು ದಿನೇ ದಿನೇ ಹೆಚ್ಚು ಜನಪ್ರಿಯಗೊಳ್ಳುತ್ತಿದೆ ಎಂದು ಜಿಲ್ಲಾಧಿಕಾರಿ ರಂದೀಪ್ ಡಿ. ತಿಳಿಸಿದರು.
ಚಾಮುಂಡೇಶ್ವರಿ ದೇವಸ್ಥಾನದಲ್ಲಿ ದೊರೆಯುವ ಹಲವಾರು ಸೇವೆಗಳ ಬುಕಿಂಗ್ ಸೌಲಭ್ಯವನ್ನು ಜಿಲ್ಲಾಡಳಿತ ಆನ್‌ಲೈನ್ ಮೂಲಕ ದೊರೆಯುವಂತೆ ಮಾಡಿದ ನಂತರ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಆನ್‌ಲೈನ್ ಬುಕಿಂಗ್ ಮೂಲಕ ಚಾಮುಂಡೇಶ್ವರಿ ದೇವಸ್ಥಾನಕ್ಕೆ ೫,೬೪,೪೩೭ ರೂ. ಆದಾಯ ಬಂದಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪ್ರಸಾದ್ ತಿಳಿಸಿದ್ದಾರೆ.
ಚಾಮುಂಡೇಶ್ವರಿ ದೇವಸ್ಥಾನಕ್ಕೆ ಟಿಕೆಟ್ ಬುಕಿಂಗ್, ಈ-ಕಾಣಿಕೆ, ಸಾಮಾನ್ಯ ಸೇವೆ, ಸೀರೆ ಸಮರ್ಪಣೆ ಸೇವೆ, ಚಂಡಿಕಾ ಹೋಮ(ಸಾಮೂಹಿಕ), ಚಂಡಿಕಾ ಹೋಮ (ವೈಯಕ್ತಿಕ) ಸೇವೆಗಳನ್ನು ಚಾಮುಂಡಿಬೆಟ್ಟದ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಬುಕ್ ಮಾಡುವ ಸೌಲಭ್ಯ ಸಹ ಒದಗಿಸಲಾಗಿದೆ. ಈ ಸೌಲಭ್ಯ ದೊರೆತ ನಂತರ ೩೮೧ ಜನ ಆನ್‌ಲೈನ್ ಸೇವೆ ಪಡೆದಿದ್ದು, ಇದರಿಂದ ದೇವಸ್ಥಾನಕ್ಕೆ ೫.೬೪ ಲಕ್ಷ ಆದಾಯ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ಬರುವ ಪ್ರವಾಸಿಗರ ಹಾಗೂ ಭಕ್ತಾಧಿಗಳ ಸಂಖ್ಯೆ ದಿನ ದಿನ ಹೆಚ್ಚಾಗುತ್ತಿದೆ. ಹಾಗಾಗಿ ಜನಜಂಗುಳಿ ಹೆಚ್ಚು ಇದ್ದಾಗ ದೇವರ ಸೇವೆ ಸಿಗುವ ಅವಕಾಶಗಳನ್ನು ಖಾತರಿಪಡಿಸಿಕೊಳ್ಳಲು ಆನ್‌ಲೈನ್ ಬುಕಿಂಗ್ ಉತ್ತಮ ಅವಕಾಶ ಒದಗಿಸಿಕೊಟ್ಟಿದೆ. ಚಾಮುಂಡೇಶ್ವರಿ ದೇವಸ್ಥಾನದ ವೆಬ್‌ಸೈಟ್ ವಿಳಾಸ: http://chamundeshwaritemple.in ಗೆ ಭೇಟಿ ನೀಡಿ ಸೇವೆ ಪಡೆಯಬಹುದು.
ಇದೇ ರೀತಿ ಅರಮನೆ ಪ್ರವೇಶಕ್ಕೂ ಆನ್‌ಲೈನ್ ಬುಕಿಂಗ್ ಸೌಲಭ್ಯ ಒದಗಿಸಲಾಗಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿ ೭೩೧ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಬುಕ್ ಆಗಿದ್ದು, ಇದರಿಂದ ಸುಮಾರು ೩೩ ಸಾವಿರ ರೂ. ಸಂಗ್ರಹವಾಗಿದೆ. ಈ ಸೌಲಭ್ಯದಿಂದ ಮನೆಯಲ್ಲೇ ಟಿಕೆಟ್ ಖಾತರಿಪಡಿಸಿಕೊಳ್ಳುವುದರಿಂದ ಪ್ರವಾಸಿಗರು ನಿರಾಯಾಸವಾಗಿ ಅರಮನೆಗೆ ಬಂದು ಹೋಗಬಹುದು. ಆನ್‌ಲೈನ್ ಬುಕಿಂಗ್‌ಗೆ ಸಹಜ ಪ್ರಕ್ರಿಯೆಯಲ್ಲಿ ಆಗುವ ವೆಚ್ಚಕ್ಕಿಂತ ಹೆಚ್ಚು ವೆಚ್ಚ ಆಗುವುದಿಲ್ಲ. ಆನ್‌ಲೈನ್ ಬುಕಿಂಗ್ ಪತ್ರದ ಪ್ರಿಂಟ್ ಔಟ್ ಅಥವಾ ಮೊಬೈಲ್ ಡಿಸ್ಪ್‌ಪ್ಲೆ ತೋರಿಸಿದರೆ ಇದಕ್ಕಾಗಿ ನಿಗದಿಯಾಗಿರುವ ಕೌಂಟರ್‌ಗಳಲ್ಲಿ ಸ್ಕ್ಯಾನ್ ಮಾಡಿ ಒಳ ಬಿಡಲಾಗುತ್ತದೆ. ಇದು ಅತ್ಯಂತ ಸರಳವಾದ ಪ್ರಕ್ರಿಯೆ ಎಂದು ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಮಣ್ಯ ತಿಳಿಸಿದ್ದಾರೆ.
ವಯಸ್ಕರಿಗೆ ೫೦ ರೂ. ಮಕ್ಕಳಿಗೆ ೩೦ ರೂ.ಗಳ ದರ ನಿಗದಿಯಾಗಿದೆ. ಶಾಲಾ ವತಿಯಿಂದ ಏರ್ಪಡಿಸುವ ಪ್ರವಾಸದಲ್ಲಿ ಬರುವ ೧೦ ರೂ. ದರ ನಿಗದಿಯಾಗಿದೆ. ಶಾಲಾ ಪ್ರವಾಸಕ್ಕೂ ಸಹ ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಬಹುದು ಎಂದು ಅವರು ಹೇಳಿದರು.
ಈ ವೆಬ್‌ಸೈಟ್ ಅತ್ಯಂತ ಸ್ಪಂದನಶೀಲವಾಗಿದ್ದು, ಡೆಸ್ಕ್‌ಟಾಪ್, ಲ್ಯಾಪ್‌ಟಾಪ್, ಮೊಬೈಲ್, ಸೇರಿದಂತೆ ಎಲ್ಲಾ ಗ್ಯಾಜೆಟ್‌ಗಳಲ್ಲೂ ತೆರೆದುಕೊಳ್ಳುತ್ತದೆ. ಇದಲ್ಲದೆ ಆನ್‌ಲೈನ್ ಬುಕಿಂಗ್ ಮಾಡುವ ಗ್ರಾಹಕರ ವ್ಯವಹಾರ ಸುರಕ್ಷತೆಗೂ ಸಹ ಹೆಚ್ಚು ಆದ್ಯತೆ ನೀಡಲಾಗಿದೆ. ಈ-ಕಾಮರ್ಸ್ ತಂತ್ರಜ್ಞಾನದ ಮಾದರಿಯಲ್ಲಿ ವೆಬ್‌ಸೈಟ್ ಅಭಿವೃದ್ಧಿ ಪಡಿಸಲಾಗಿದ್ದು, ಬಳಕೆಯೂ ಅತ್ಯಂತ ಸರಳವಾಗಿದೆ ಎಂದು ಅರಮನೆ ವೆಬ್‌ಸೈಟ್ ಅಭಿವೃದ್ಧಿ ಪಡಿಸಿರುವ ಫ್ಯೂಚರ್ ಡಿಸೈನ್ ಟೆಕ್ನಾಲಜೀಸ್‌ನ ಮುಖ್ಯಸ್ಥ ನವೀನ್ ಕವಿರತ್ನ ತಿಳಿಸಿದ್ದಾರೆ. ಮೈಸೂರು ಅರಮನೆ ವೆಬ್‌ಸೈಟ್ ವಿಳಾಸ:www.mysorepalace.gov.in ಗೆ ಭೇಟಿ ನೀಡಿ ಮುಂಗಡವಾಗಿ ಕಾಯ್ದಿರಿಸಬಹುದು. (ವರದಿ ಬಿ.ಎಂ)

 

Leave a Reply

comments

Related Articles

error: