ದೇಶಪ್ರಮುಖ ಸುದ್ದಿ

ತೆಲಂಗಾಣದಲ್ಲಿ ಕೆಸಿಆರ್ ನಿರ್ಮಿಸುತ್ತಿದ್ದಾರೆ ಹೊಸದೊಂದು ತಿರುಪತಿ !

ಹೈದರಾಬಾದ್, ಪ್ರಮುಖ ಸುದ್ದಿ (ಅ.11): ಪ್ರಪಂಚದಲ್ಲೇ ಪ್ರಸಿದ್ಧಿಯಾದ ತಿರುಪತಿ ವೆಂಕಟೇಶ್ವರ ದೇವಾಲಯವು ಸಮೈಖಾಂಧ್ರ ವಿಭಜನೆಯಾಗಿ ತೆಲಂಗಾಣ ರಚನೆಯಾದ ನಂತರ ಆಂಧ್ರ ಪ್ರದೇಶದಲ್ಲೇ ಉಳಿಯಿತು. ಆದರೆ ತೆಲಂಗಾಣದಲ್ಲಿರುವ ತೆಲುಗು ಜನರು ತಿರುಪತಿಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವುದು ಎಲ್ಲಿರಿಗೂ ತಿಳಿದ ವಿಚಾರ.

ತಿರುಪತಿ ಆಂಧ್ರದ ಪಾಲಾಯಿತಲ್ಲಾ ಎನ್ನುವ ಕೊರಗು ಮತ್ತು ಆದಾಯ ತರುವ ಇಂತಹ ಪ್ರಸಿದ್ಧ ಯಾತ್ರಾಸ್ಥಳ ತೆಲಂಗಾಣದಲ್ಲಿ ಇಲ್ಲವೆಂಬ ಚಿಂತೆ ಇದೀಗ ತೆಲಂಗಾಣ ಸರ್ಕಾರವನ್ನೂ ಕಾಡುತ್ತಿದೆ. ಇದಕ್ಕಾಗಿ ತೆಲಂಗಾಣದ ಕೆಸಿಆರ್ ನೇತೃತ್ವದ ಸರ್ಕಾರ ಉಪಾಯ ಮಾಡಿದ್ದು, ತೆಲಂಗಾಣದಲ್ಲೂ ಹೊಸದೊಂದು ತಿರುಪತಿ ನಿರ್ಮಿಸಲು ನಿರ್ಧರಿಸಿದೆ.

ತೆಲಂಗಾಣದ ಯಾದಾದ್ರಿ ಜಿಲ್ಲೆಯಲ್ಲಿರುವ ಶತಮಾನಗಳಷ್ಟು ಹಳೆಯದಾದ ಲಕ್ಷ್ಮೀ ನರಸಿಂಹ ದೇವರ ದೇಗುಲವನ್ನು ತಿರುಮಲ ದೇಗುಲದ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಕೆಸಿಆರ್ ನಿರ್ಧರಿಸಿದ್ದಾರೆ. ಅಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸಲು ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ನೇತೃತ್ವದ ಸರಕಾರ ಹೆಜ್ಜೆ ಇಟ್ಟಿದೆ. ಈ ಉದ್ದೇಶಕ್ಕಾಗಿ ಈಗಾಗಲೇ 1,800 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ.

ಈ ದೇಗುಲ ನಿರ್ಮಾಣ ಕಾರ್ಯಕ್ಕೆ ಕಲ್ಲುಗಳ ಬಳಕೆ ಮಾಡಲಾಗುತ್ತಿಲ್ಲ ಎನ್ನುವುದು ವಿಶೇಷ. ಕಾಕತೀಯ ರಾಜವಂಶ ಕಾಲದ ದೇಗುಲ ಇದಾಗಿದೆ. ಹೀಗಾಗಿ, ಅದೇ ಕಾಲದ ಶಿಲ್ಪಕಲೆಯಲ್ಲಿ ನಿರ್ಮಾಣವಾಗಿತ್ತು ದೇಗುಲ. ಹೀಗಾಗಿ ಕಪ್ಪು ಬಣ್ಣದ ಗ್ರಾನೈಟ್ ಅನ್ನು ನಿರ್ಮಾಣಕ್ಕೆ ಬಳಸಲಾಗುತ್ತದೆ. ಇದರ ಜತೆಗೆ 2.7 ಕಿಮೀ ಉದ್ದದ ಪ್ರದಕ್ಷಿಣೆ ರಸ್ತೆಯ ನಿರ್ಮಾಣವನ್ನೂ ಮಾಡಲಾಗುತ್ತಿದೆ.

ಆರಂಭಿಕ ಕೆಲಸಗಳು ಭರದಿಂದ ಸಾಗುತ್ತಿವೆ. ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರ ದೇಗುಲದ ಮಾದರಿಯಲ್ಲೇ ಯಾದಾದ್ರಿಯಲ್ಲಿ ನಿರ್ಮಾಣವಾಗುತ್ತಿರುವ ದೇಗುಲದ ಸುತ್ತ 9 ಬೆಟ್ಟಗಳಿವೆ. ಜತೆಗೆ ನಿತ್ಯಹರಿದ್ವರ್ಣಮಯ ಕಾಡಿನಿಂದ ಈ ಪರಿಸರ ಒಳಗೂಡಿದೆ. 1,400 ಎಕರೆ ಪ್ರದೇಶದಲ್ಲಿ ದೇಗುಲದ ಅರ್ಚಕರು, ಸಿಬ್ಬಂದಿ, ಪ್ರವಾಸಿಗಳಿಗೆ ತಂಗಲು ಕಾಟೇಜುಗಳ ನಿರ್ಮಾಣ ಶುರುವಾಗಿದೆ. 2019 ರ ಒಳಗಾಗಿ ಪೂರ್ಣ ಕಾಮಗಾರಿ ಮುಗಿಯಬೇಕೆಂಬುದು ಗುರಿ. 2018 ರ ಮೇ ಒಳಗಾಗಿ ಮೊದಲ ಹಂತದ ಕಾಮಗಾರಿ ಮುಗಿಸಲು ಉದ್ದೇಶಿಸಲಾಗಿದೆ. ಅದಕ್ಕಾ ಗಿಯೇ ಯಾದಾದ್ರಿ ದೇಗುಲ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗಿದೆ. ದೇಗುಲಕ್ಕೆ ಸುಲಲಿತ ಸಂಚಾರ ವ್ಯವಸ್ಥೆಗಾಗಿ ನಾಲ್ಕು ಪಥಗಳ ಹೆದ್ದಾರಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

(ಎನ್‍ಬಿಎನ್‍)

Leave a Reply

comments

Related Articles

error: