ಮೈಸೂರು

ಕನ್ನಡಕ್ಕೆ ಎಲ್ಲರನ್ನೂ ಒಗ್ಗೂಡಿಸುವ ಸಾಮರ್ಥ್ಯವಿದೆ: ಡಾ. ತಾರಾನಾಥ

ಕನ್ನಡ ಒಂದು ಸಾಧನ ಭಾಷೆ. ಎಲ್ಲರನ್ನೂ ಒಂದುಗೂಡಿಸುವ ಸಾಮರ್ಥ್ಯ ಕನ್ನಡ ಭಾಷೆಗಿದೆ ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕ ಡಾ. ತಾರಾನಾಥ ಹೇಳಿದರು.

ಮೈಸೂರಿನ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಏರ್ಪಡಿಸಲಾದ 61ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಡಾ. ತಾರಾನಾಥ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಮ್ಮ ಭಾಷಾ ವಲಯದಲ್ಲಿದ್ದಾಗ ಅದರ ಪ್ರಯೋಜನ, ಪ್ರಾಬಲ್ಯದ  ಅರಿವಾಗುವುದಿಲ್ಲ. ಆದರೆ ಅದನ್ನು ಬಿಟ್ಟು ಬೇರೆಡೆ ಹೋದಾಗ ನಾವೇನು ಕಳೆದುಕೊಂಡಿದ್ದೇವೆ ಎನ್ನುವುದರ ಅರಿವಾಗುತ್ತದೆ ಎಂದರು. ಕನ್ನಡವನ್ನು ಪ್ರೀತಿಸುತ್ತಿದ್ದೇವೆ ಎಂದರೆ ಬೇರೆ ಭಾಷೆಯನ್ನು ದ್ವೇಷಿಸುತ್ತಿದ್ದೇವೆ ಎಂದು ತಿಳಿದುಕೊಳ್ಳಬಾರದು. ನಾವು ಅಷ್ಟೊಂದು ಹೆಚ್ಚಾಗಿ ನಮ್ಮ ಭಾಷೆಯನ್ನು ಪ್ರೀತಿಸುತ್ತಿದ್ದೇವೆ ಎಂದರ್ಥ ಎಂದು ತಿಳಿಸಿದರು. ನಮ್ಮ ಹಿಂದಿನ ಶರಣರು, ದಾಸರು, ರಾಜರು, ದಾರ್ಶನಿಕರು ಕನ್ನಡಕ್ಕಾಗಿ ಎಷ್ಟೆಲ್ಲಾ ಹೋರಾಟ ನಡೆಸಿದ್ದಾರೆ ಎನ್ನುವುದು ಇತಿಹಾಸಗಳಿಂದ ತಿಳಿಯುತ್ತದೆ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿದ್ದು, ಕನ್ನಡದ ಕವಿಗಳು ಕನ್ನಡದ ಮಹತ್ವದ ಕುರಿತು ಸಾರಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಗುಂಡಪ್ಪ, ಗೌರವ ಖಜಾಂಚಿ ಎಸ್.ಎನ್. ಲಕ್ಷ್ಮಿನಾರಾಯಣ, ಪ್ರಾಂಶುಪಾಲ ಪ್ರೊ. ಕೆ.ಬಿ. ವಾಸುದೇವ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: