ಕರ್ನಾಟಕ

ವಿಷನ್-2025 ಡಾಕ್ಯುಮೆಂಟ್ ಅಡ್ವಾನ್ಸ್ ತಂಡ ಭೇಟಿ : ಅಭಿವೃದ್ಧಿ ಕುರಿತು ಚರ್ಚೆ

ರಾಜ್ಯ(ಮಡಿಕೇರಿ) ಅ.11 :-ಮುಂದಿನ ಏಳು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರವು ವಿಷನ್-2025 ಡಾಕ್ಯುಮೆಂಟ್ ಹೆಸರಿನಲ್ಲಿ ನೀಲನಕ್ಷೆ ಮತ್ತು ಅನುಷ್ಠಾನ ಕಾರ್ಯ ಯೋಜನೆ ಸಿದ್ಧಪಡಿಸುತ್ತಿದ್ದು, ಆ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಅಡ್ವಾನ್ಸ್ ತಂಡದ ಅಧಿಕಾರಿಗಳು ಚರ್ಚೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಅಡ್ವಾನ್ಸ್ ತಂಡದ ವೇಣುಗೋಪಾಲ್ ,ಅಕ್ಟೋಬರ್, 31 ರಂದು ನಗರದಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ರೇಣುಕಾ ಚಿದಂಬರಂ ಅವರ ಅಧ್ಯಕ್ಷತೆಯಲ್ಲಿ ವಿಷನ್-2025 ಡಾಕ್ಯುಮೆಂಟ್ ಯೋಜನೆಯ ಪ್ರಮುಖ ಸಭೆ ನಡೆಯಲಿದ್ದು, ಅಗತ್ಯ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕಿದೆ ಎಂದರು.

ಜಿಲ್ಲಾ ಮಟ್ಟದ ಕಾರ್ಯಾಗಾರ ಸಂದರ್ಭದಲ್ಲಿ ಸಮಾನಾಂತರ ವಿಷಯಗಳ ಬಗ್ಗೆ ಚರ್ಚೆಗಳು ನಡೆಯಲಿವೆ. ನಗರ ಮೂಲ ಸೌಕರ್ಯ, ಸಾಮಾಜಿಕ ನ್ಯಾಯ, ಆರೋಗ್ಯ ಶಿಕ್ಷಣ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಕೈಗಾರಿಕಾಭಿವೃದ್ಧಿ, ಸೇವೆಗಳು, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ, ಮಾಹಿತಿ ಮತ್ತು ತಂತ್ರಜ್ಞಾನ ಹಾಗೆಯೇ ಆಡಳಿತ ಕಾನೂನು ಮತ್ತು ನ್ಯಾಯ ಈ ಐದು ಗುಂಪಿನ ವಿಷಯಗಳ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಸಬೇಕಿದೆ ಎಂದು ಅವರು ತಿಳಿಸಿದರು.

ವಿಷನ್-2025 ಡಾಕ್ಯುಮೆಂಟ್ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ತಜ್ಞರ ಅಭಿಪ್ರಾಯ ಪಡೆಯಬೇಕಿದೆ. ಆ ನಿಟ್ಟಿನಲ್ಲಿ ಜಿಲ್ಲೆಯ ಮಾಜಿ ಸೈನಿಕರು, ಹಿರಿಯ ಸಾಹಿತಿಗಳು, ಲೇಖಕರು, ಪತ್ರಕರ್ತರು, ನಿವೃತ್ತ ನ್ಯಾಯಾಧೀಶರು, ರಾಜ್ಯ ಹಾಗೂ ರಾಷ್ಟ್ರ ಪಶಸ್ತಿ ಪಡೆದ ಕ್ರೀಡಾಪಟುಗಳು, ಸ್ಟಾಕ್‍ಹೋಲ್ಡರ್, ಚೇಂಬರ್ ಆಫ್ ಕಾಮರ್ಸ್, ಎನ್.ಜಿ.ಒ. ಸಂಸ್ಥೆಗಳ ಪ್ರತಿನಿಧಿಗಳು, ನಿವೃತ್ತ ಅಧಿಕಾರಿಗಳು, ಉಪನ್ಯಾಸಕರು, ಹೋಂಸ್ಟೇ ಅಸೋಸಿಯೇಷ್‍ವರು ಹೀಗೆ ಹಲವು ತಜ್ಞರಿಂದ ಮಾಹಿತಿ ಪಡೆಯಬೇಕಿದೆ. ಮುಂದಿನ ಏಳು ವರ್ಷದಲ್ಲಿ ಜಿಲ್ಲೆಯನ್ನು ಪ್ರಗತಿಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಚರ್ಚೆ ನಡೆಸಬೇಕಿದೆ ಎಂದು ಹೇಳಿದರು.    ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಜಿಲ್ಲೆಯ ದೂರದೃಷ್ಟಿ ಸಂಬಂಧಿಸಿದಂತೆ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ತಜ್ಞರನ್ನು ಗುರುತಿಸಿ ಅಕ್ಟೋಬರ್, 31 ರ ಕಾರ್ಯಕ್ರಮ ಯಶಸ್ಸಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಅವರು ಮಾತನಾಡಿ ಕೊಡಗು ಜಿಲ್ಲೆಯ ಅಭಿವೃದ್ಧಿ ಸಂಬಂಧಿಸಿದಂತೆ ತಳ ಮಟ್ಟದಲ್ಲಿ ಮಾಹಿತಿ ಸಂಗ್ರಹಿಸಬೇಕಿದೆ. ಮುಂದಿನ ಏಳು ವರ್ಷದಲ್ಲಿ ಜಿಲ್ಲೆಯ ಅಭಿವೃದ್ಧಿ ಮತ್ತು ಅನುಷ್ಠಾನ ಸಂಬಂಧಿಸಿದಂತೆ ಚರ್ಚೆಗಳು ನಡೆಯಬೇಕಿದೆ ಎಂದು ಸಲಹೆ ಮಾಡಿದರು.

ಸಭೆಯಲ್ಲಿ ಜಿ.ಪಂ.ಯೋಜನಾ ನಿರ್ದೇಶಕರಾದ ಸಿದ್ದಲಿಂಗಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಡಿ.ಎಂ.ದಾನೋಜಿ, ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಸಿ.ಜಗನ್ನಾಥ್, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಗೋಪಾಲಕೃಷ್ಣ, ಮತ್ತಿತರರು ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: