
ಮೈಸೂರು
ನಿಶ್ಚಿತ ಗುರಿಯೊಂದಿಗೆ ಸಾಧನೆ ಮಾಡಲು ಸ್ವಾಮಿ ಶಾಂತವೃತಾನಂದಜೀ ಮಹಾರಾಜ್ ಸಲಹೆ
ಮೈಸೂರು,ಅ.11:- ಕುವೆಂಪುನಗರದಲ್ಲಿರುವ ಜೆಎಸ್ ಎಸ್ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಡಾ.ಶಿವರಾತ್ರೀ ರಾಜೇಂದ್ರ ಶ್ರೀಗಳ 102ನೇ ಜಯಂತಿಯನ್ನು ಆಚರಿಸಲಾಯಿತು.
ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಸ್ವಾಮಿ ಶಾಂತವೃತಾನಂದಜೀ ಮಹಾರಾಜ್ ಡಾ.ಶಿವರಾತ್ರೀ ರಾಜೇಂದ್ರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯ್ಯುವ ಮೂಲಕ ಗೌರವ ಸಮರ್ಪಿಸಿದರು. ಬಳಿಕ ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಸಿಇಒ ಕೆ.ಎಸ್,ಸುರೇಶ್ ಶ್ರೀಗಳ ಸಾಧನೆಯನ್ನು ವಿವರಿಸಿದರು. ಶ್ರೀಗಳು ದಾಸೋಹ ಆರಂಭಿಸಿದ್ದಲ್ಲದೇ, ವಿದ್ಯಾರ್ಥಿ ವಸತಿನಿಲಯಗಳನ್ನು ಆರಂಭಿಸಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದನ್ನು ವಿವರಿಸಿದರು. ಸ್ವಾಮಿ ಶಾಂತವೃತಾನಂದಜೀ ಮಹಾರಾಜ್ ಮಾತನಾಡಿ ನಿಶ್ಚಿತ ಗುರಿಯೊಂದಿಗೆ ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಅತಿ ಕಿರಿಯ ವಯಸ್ಸಿನಲ್ಲಿಯೇ ಕಂಪನಿಯೊಂದಕ್ಕೆ ಸಿಇಒ ಆಗಿ ಕರ್ತವ್ಯ ನಿರ್ವಹಿಸಿದ ಸುಹಾಸ್ ಗೋಪಿನಾಥ್ ಅವರ ಸಾಧನೆಗಳನ್ನು ಉದಾಹರಣೆಯಾಗಿ ವಿವರಿಸಿ ನೀವೂ ಕೂಡ ಅವರಂತೆಯೇ ಸಾಧನೆಗಳನ್ನು ಮಾಡಿ ಸಮಾಜದಲ್ಲಿ ಗಣ್ಯವ್ಯಕ್ತಿಗಳಾಗಿ ಬಾಳಿ ಎಂದು ಸಲಹೆ ನೀಡಿದರು.
ಈ ಸಂದರ್ಭ ವಿರಕ್ತಮಠದ ಶ್ರೀಕಂಠಸ್ವಾಮಿಗಳು, ಪ್ರಾಂಶುಪಾಲ ಪ್ರಭುಸ್ವಾಮಿ, ಹಿರಿಯ ಪ್ರಾಧ್ಯಾಪಕ ನಾಗೇಂದ್ರ ಮೂರ್ತಿ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)