ಕರ್ನಾಟಕ

ಹಾಸನ ಜಿಲ್ಲಾ ಗ್ರಾಹಕರ ವ್ಯಾಜ್ಯ: ವೇದಿಕೆಯಿಂದ 30 ತಿಂಗಳಲ್ಲಿ ಒಂದು ಸಾವಿರ ಪ್ರಕರಣಗಳ ವಿಲೇವಾರಿ

ಹಾಸನ (ಅ.12) : ಹಾಸನ ಜಿಲ್ಲಾಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ಎ.ಲೋಕೇಶ್‍ಕುಮಾರ್ ಹಾಗೂ ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಕೆ.ಶಾಂತಲಾರವರನ್ನೊಳಗೊಂಡ ಪೀಠವು ಕಳೆದ 30 ತಿಂಗಳುಗಳಿಂದ ಸುಮಾರು ಒಂದು ಸಾವಿರ ವಿವಿಧ ಬಗೆಯ ದೂರುಗಳನ್ನು ವಿಲೇವಾರಿ ಮಾಡಿದ್ದಾರೆ.

ಪ್ರತಿಯೊಬ್ಬಗ್ರಾಹಕ ತನ್ನ ದೈನಂದಿನ ಜೀವನದ ಹಲವಾರು ವ್ಯವಹಾರಗಳಲ್ಲಿ ತನಗೆ ಅಗತ್ಯವಾದ ಸರಕು ಖರೀದಿಸುವುದು ಅಥವಾ ವಿವಿದ ಸಂಸ್ಥೆಗಳಿಂದ ಸೇವೆಯನ್ನು ಪಡೆದುಕೊಳ್ಳುವುದು ಅನಿವಾರ್ಯವೇ ಸರಿ. ಆದರೇ ಈಗಿನ ಹಲವಾರು ವ್ಯವಹಾರಗಳಲ್ಲ್ಲಿ ಮೋಸ, ವಂಚನೆ, ಶೋಷಣೆ, ಕರ್ತವ್ಯ ಲೋಪ, ಸೇವಾಕೊರತೆ, ದುರಾಡಳಿತ ವಗೈರೆಗಳನ್ನು ಗ್ರಾಹಕನು ಅನುಭವಿಸುತ್ತಿದ್ದಾನೆ. ಈ ಎಲ್ಲಾ ಶೋಷಣೆಗಳಿಂದ ಗ್ರಾಹಕನ್ನು ರಕ್ಷಿಸಲು ಹಾಗೂ ಆತನಿಗೆ ಸರಿಯಾದ ನ್ಯಾಯ ದೊರಕಿಸಿಕೊಡಲು ಒಂದು ವೇದಿಕೆಯು ಅತ್ಯಾವಶ್ಯಕವಿದೆ.

ಇತ್ತೀಚಿನ ದಿನಗಳಲ್ಲಿ ಗ್ರಾಹಕನ ಹಿತದೃಷ್ಟಿ ಇಟ್ಟುಕೊಂಡು ಅವನಿಗಾಗುತ್ತಿರುವ ಶೋಷಣೆಗಳನ್ನು ತಪ್ಪಿಸುವ ಸಲುವಾಗಿ ಹಾಗೂ ಆತನ ಹಕ್ಕು ಹಿತದೃಷ್ಟಿಗಳ ಬಗ್ಗೆ ವಿಶೇಷವಾದ ಕಾಳಜಿ ವಹಿಸುವಲ್ಲಿ ಕೇಂದ್ರ ಸರ್ಕಾರವು 1986 ರಲ್ಲಿ ಗ್ರಾಹಕ ಹಿತರಕ್ಷಣಾ ಕಾಯಿದೆಯನ್ನು ಜಾರಿಗೆ ತಂದಿರುತ್ತದೆ.

ಈ ಕಾಯಿದೆಯಡಿಯಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕಯನ್ನು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಎಂಬ ಮೂರು ಹಂತಗಳಲ್ಲಿ ಅರೆ-ನ್ಯಾಯಾಂಗ ವ್ಯವಸ್ಥೆಯಾಗಿ ರೂಪಿಸಲಾಗಿದೆ. ಹಾಗೂ ಈ ಕಾಯಿದೆಯಡಿ ಸ್ಥಾಪಿತವಾಗಿರುವ ವೇದಿಕೆಗಳಲ್ಲಿ ಗ್ರಾಹಕನು ತನಗೆ ಉಂಟಾಗಿರುವ ಮೋಸ, ಶೋಷಣೆ ವಿರುದ್ದ ಕಾನೂನಾತ್ಮಕವಾಗಿ ಹೋರಾಡಿ ನ್ಯಾಯ ಪಡೆದುಕೊಳ್ಳಬಹುದು. ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಮೂಲ ಧ್ಯೇಯ ನೊಂದ, ಶೋಷಣೆಗೊಳಗಾದ ಗ್ರಾಹಕರುಗಳಿಗೆ ನ್ಯಾಯ ಒದಗಿಸಿಕೊಡುವುದು ಆಗಿರುತ್ತದೆ. ಈ ಕಾಯಿದೆಯಡಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಸ್ಥಾಪಿತವಾಗಿರುವ ಹಾಸನ ಜಿಲ್ಲಾಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ಇದರ ಒಂದು ಅಂಗವಾಗಿದೆ.

ಹಾಸನ ಜಿಲ್ಲಾಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ಹಲವಾರು ಬಗೆಯ ವಿವಿಧ ದೂರುಗಳು ದಾಖಲಾಗುತ್ತಿದೆ ಹಾಗೂ ಪರಿಹರಿಸಲಾಗುತ್ತಿದೆ. ಈ ಮೂಲಕ ಗ್ರಾಹಕರು ತಮಗೆ ಉಂಟಾದ ಮೋಸದ ವಿರುದ್ದ ಕಾನೂನಾತ್ಮಕವಾಗಿ ಹೋರಾಡಿ ನ್ಯಾಯವನ್ನು ಪಡೆದುಕೊಳ್ಳುತ್ತಿದ್ದಾರೆ.

ನಮ್ಮ ಸಮಾಜ ಕಾಲ ಕಾಲಕ್ಕೆ ತುಂಬಾ ಮುಂದುವರೆದರೂ ಸಹ ಕೆಲ ಗ್ರಾಹಕರುಗಳಿಗೆ ಅವರ ಹಕ್ಕಿನ ಬಗ್ಗೆ ಅರಿವಾಗಲಿ, ತಿಳುವಳಿಕೆಯಾಗಲಿ ಇರುವುದಿಲ್ಲ ಆದ್ದರಿಂದ ಅವರು ಕೆಲ ವ್ಯಾಪಾರಿಗಳಿಂದ ನಿರಂತರ ಮೋಸ ಹಾಗೂ ಶೋಷಣೆಗೊಳಗಾಗುತ್ತಿರುತ್ತಾರೆ. ಆದುದರಿಂದಎಲ್ಲಾ ಗ್ರಾಹಕರುಗಳು ತಮಗೆ ಮೋಸ ಉಂಟಾದ ಸಂದರ್ಭದಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಮುಖಾಂತರ ತಮಗೆ ಉಂಟಾದ ಮೋಸಕ್ಕೆ ನ್ಯಾಯವನ್ನು ಪಡೆದುಕೊಳ್ಳಬೇಕು ಹಾಗೂ ಇದರ ಬಗ್ಗೆ ಅರಿವನ್ನು ಇತರರಿಗೂ ತಿಳಿಸಬೇಕು ಎಂಬುದಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ತಿಳಿಸಿದೆ.

(ಎನ್‍ಬಿಎನ್)

Leave a Reply

comments

Related Articles

error: