ಪ್ರಮುಖ ಸುದ್ದಿಮೈಸೂರು

ಟಿಪ್ಪು ಜಯಂತಿ: ನಗರದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಿ

ನಗರದಲ್ಲಿ ನವೆಂಬರ್ 10ರಂದು ಸುರಕ್ಷಿತವಾಗಿ ಟಿಪ್ಪು ಜಯಂತಿ ಆಚರಿಸುವ ನಿಟ್ಟಿನಲ್ಲಿ ಪೊಲೀಸರು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

18ನೇ ಶತಮಾನದ ಮೈಸೂರಿನ ಸಾಮ್ರಾಜ್ಯದ ದೊರೆಯಾಗಿದ್ದ ಟಿಪ್ಪು ಸುಲ್ತಾನ್‍ನ ಜಯಂತಿಯನ್ನು ಈ ವರ್ಷವೂ ಆಚರಿಸಲು ಕರ್ನಾಟಕ ಸರಕಾರ ತೀರ್ಮಾನಿಸಿದೆ. ವಿಪಕ್ಷ ಬಿಜೆಪಿ ಮತ್ತು ಆರ್‍ಎಸ್‍ಎಸ್‍ ಸೇರಿ ಹಲವು ಹಿಂದೂ ಸಂಘಟನೆಗಳು ಟಿಪ್ಪು ಜಯಂತಿ ಆಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳು ಶಾಂತವಾಗಿ ನಡೆಯಲು ಪೊಲೀಸರು ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‍.ಸಿ. ಮಹದೇವಪ್ಪ ಕಲಾಮಂದಿರದಲ್ಲಿ ನಡೆಯಲಿರುವ ಜಯಂತಿಯನ್ನು ಉದ್ಘಾಟಿಸಲಿದ್ದು, ದಿನವೀಡಿ ಟಿಪ್ಪು ಜೀವನ ಚರಿತ್ರೆ ಸಂಬಂಧಿತ ಕಾರ್ಯಕ್ರಮಗಳು ನಡೆಯಲಿವೆ.

ಕೋಮುವಾದ ನಡೆಸಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಎಚ್ಚರಿಕೆ ನೀಡಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ನಗರ ಪೊಲೀಸ್ ಆಯುಕ್ತ ಡಾ. ಎ. ಸುಬ್ರಮಣ್ಯ ರಾವ್ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಂತೆ ಮತ್ತು ಕೋಮು ಭಾವನೆಗಳಿಗೆ ಧಕ್ಕೆ ಉಂಟುಮಾಡದಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ಟಿಪ್ಪು ಜಯಂತಿ ಆಚರಿಸುವವರು ಮೊದಲೇ ಅಧಿಕಾರಿಗಳಿಂದ ಅನುಮತಿ ಪಡೆಯಬೇಕೆಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

Leave a Reply

comments

Related Articles

error: