ಪ್ರಮುಖ ಸುದ್ದಿಮೈಸೂರು

83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ : ಕನ್ನಡದ ಕಂಪನ್ನು ಪಸರಿಸುವ ಕೆಲಸವಾಗಬೇಕು; ಡಾ.ಹೆಚ್.ಸಿ.ಮಹದೇವಪ್ಪ

 ಮೈಸೂರು,ಅ.12:- ಕನ್ನಡ  ಭಾಷೆ , ಸಂಸ್ಕೃತಿ, ಸಾಹಿತ್ಯವನ್ನು ರಾಜ್ಯದ ಮೂಲೆಮೂಲೆಗೆ ತಲುಪಿಸುವ ಕೆಲಸ ಕನ್ನಡ ಸಾಹಿತ್ಯ ಸಮ್ಮೇಳನಗಳಿಂದ ಆಗಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು.

ಮೈಸೂರಿನ ಕೋಟೆ ಆಂಜನೇಯ ದೇವಸ್ಥಾನದ ಬಳಿ ಇರುವ ಕನ್ನಡ ಸಾಹಿತ್ಯ ಪರಿಷತ್ ಕಚೇರಿ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದರು. ಕನ್ನಡ ತೇರನ್ನು ಎಳೆಯುವ ಕೆಲಸ ಎಲ್ಲರಿಂದಲೂ ಆಗಬೇಕು. ಅಭಿಪ್ರಾಯ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು. ಅಂಥಹ ಸಾಮರ್ಥ್ಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕಿದೆ. ಅದು ಮೈಸೂರಿನಲ್ಲಿ ಈ ಬಾರಿ ನಡೆಯುತ್ತಿರುವುದು ಸಂತೋಷದ ವಿಷಯ.ಅದರಲ್ಲೂ ಚಂಪಾ ಅವರು ಅಧ್ಯಕ್ಷತೆ ವಹಿಸುತ್ತಿರುವುದು ಖುಷಿ ನೀಡಿದೆ ಎಂದರು, ಯೋಗ್ಯರಾದವರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಅಂಥಹ ಬ್ಬ ಪ್ರತಿರೋಧ ವ್ಯಕ್ತಿತ್ವವುಳ್ಳ ಸಾಹಿತಿ, ಸಾಮಾಜಿಕ ವ್ಯವಸ್ಥೆಯ ವಿರುದ್ಧ ತಿರುಗಿ ಬೀಳುವ ಸಾಹಿತ್ಯವನ್ನು ನೀಡಿದಂತಹ ಸಾಹಿತಿ ಅಧ್ಯಕ್ಷರಾಗುತ್ತಿರುವುದು ಸಂತಸದ ವಿಷಯ. ಸಾಹಿತ್ಯ ಸಮ್ಮೇಳನದ ಯಶಸ್ಸು ಸರ್ಕಾರ ಜಿಲ್ಲಾಡಳಿತಕ್ಕೆ ಸಿಗತಕ್ಕಂತದ್ದಲ್ಲ. ಅದು ಇಡೀ ಮೈಸೂರಿಗರಿಗೆ ಸೇರಿದ್ದು. ಅನೇಕ ಪ್ರಕಾಶಕರು ಬಂದಿದ್ದಾರೆ. ಅವರಿಗೂ ಅವಕಾಶ, ಪ್ರೋತ್ಸಾಹ ಸಿಗಲಿದೆ. ಸಮ್ಮೇಳನ ಉತ್ಕೃಷ್ಟವಾಗಿ ನಡೆಯುವ ಮೂಲಕ ಜನತೆಗೆ ಒಳ್ಳೆಯ ಸಂದೇಶ ನೀಡಬೇಕು. ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮೈಸೂರಿನಲ್ಲಿ ಆಯೋಜಿಸಲು ಒಪ್ಪಿಗೆ ಕೇಳಿದಾಗ ಕನ್ನಡದ ಕಟ್ಟಾಳು ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ಒಪ್ಪಿಗೆ ನೀಡಿದರು ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಕ್ಕೆ ದೊಡ್ಡ ಇತಿಹಾಸವೇ ಇದೆ. 102ವರ್ಷಗಳನ್ನು ಕಂಡಿದೆ. 1915ನೇ ಇಸ್ವಿಯಲ್ಲಿ ನಾಲ್ವಡಿ ಕೃಷ್ಣರಾಜ ಡೆಯರ್ ರಾಜ್ಯದಲ್ಲಿ ಅನೇಕ ಪರಿಷತ್ ಗಳನ್ನು ಸ್ಥಾಪಿಸಿದರು. ಅದರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಒಂದು. ಅವರ ದೂರದೃಷ್ಟಿಯಿಂದಲೇ ಹುಟ್ಟಿಕೊಂಡಿದ್ದು ಕನ್ನಡ ಸಾಹಿತ್ಯ ಪರಿಷತ್. ಸಾಂಸ್ಕೃತಿಕ ನಗರಿ ಮೈಸೂರಿನ ಡಳಿತವನ್ನು ದೇಶಕ್ಕೆ ಪರಿಚಯಿಸಿದ, ಸಂವಿಧಾನದ  ಆಶಯಗಳನ್ನು ಸ್ವಾತಂತ್ರ್ಯಪೂರ್ವದಲ್ಲೇ  ಆಡಳಿತದ ಮೂಲಕ ತೋರಿಸಿಕೊಟ್ಟ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಸಲ್ಲಬೇಕು. 27ವರ್ಷಗಳ ನಂತರ ಮತ್ತೆ ಮೈಸೂರಿನಲ್ಲಿ ನವೆಂಬರ್ 24,25,26ರಂದು  83ನೇ  ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ ಎಂದು ತಿಳಿಸಿದರು. ರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಕಂಪು ಪಸರಿಸಬೇಕು ಎಂದು ತಿಳಿಸಿದರು.

ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಮಾತನಾಡಿ ಕಲಹಕ್ಕೆ ಎಡೆಮಾಡಿಕೊಡಬಾರದು. ಎಲ್ಲರೂ ಸಾಹಿತ್ಯ ಸಮ್ಮೇಳನಕ್ಕೆ ಕೈಜೋಡಿಸಿ ಎಂದು ಹೇಳುತ್ತಾರೆ ಆದರೆ ಅದು ಹಾಗಲ್ಲ. ಕೈಜೋಡಿಸುವುದಕ್ಕಿಂತ ಮುಖ್ಯವಾಗಿ ಹೃದಯ ಜೋಡಿಸಬೇಕು ಎಂದರು. ನನ್ನನ್ನು ಯಾಕೆ ಕರೆದರು ಎಂದು ಯೋಚಿಸುತ್ತಿದ್ದೆ. ಸಾಹಿತ್ಯ ಸಮ್ಮೇಳನದ ಮೈಸೂರಿನ ಮಾಜಿ ಅಧ್ಯಕ್ಷರುಗಳಲ್ಲಿ ಈಗ ಉಳಿದಿರುವುದು ನಾನೇ ಇದು ದುರ್ದೈವವೋ ಸುದೈವವೋ ಗೊತ್ತಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಈ ಸಂದರ್ಭ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಜಿಲ್ಲಾಧಿಕಾರಿ ಡಿ.ರಂದೀಪ್, ಮಾಜಿ ಅಧ್ಯಕ್ಷ ಚಂದ್ರು ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: