ಕರ್ನಾಟಕಮೈಸೂರು

ವಿವಿಧ ವಸತಿ ಯೋಜನೆಗಳಡಿ ನಿವೇಶನ ಒದಗಿಸಲು ಜಿ.ಪಂ ಸಿಇಒ ಪಿ.ಶಿವಶಂಕರ್ ಸೂಚನೆ

ಮೈಸೂರು (ಅ.12): ಜಿಲ್ಲೆಯಾದ್ಯಂತ ವಿವಿಧ ವಸತಿ ಯೋಜನೆಗಳಡಿ ಸೌಲಭ್ಯ ಫಲಾನುಭವಿಗಳಿಗೆ ವಸತಿ ಸೌಲಭ್ಯ ಒದಗಿಸಲು ಅಗತ್ಯ ನಿವೇಶನ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಶಿವಶಂಕರ್ ಅವರು ಅಧಿಕಾರಿಗಳಿಗೆ ತಿಳಿಸಿದರು.

ಬುಧವಾರ ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯಿಮಾ ಸುಲ್ತಾನ ಅವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಾದ್ಯಂತ ನಿವೇಶನಕ್ಕೆ ಬಂದಿರುವ ಅರ್ಜಿಯನ್ನು ಪರಿಶೀಲಿಸಿ, ನಿವೇಶನವನ್ನು ನಿರ್ಮಿಸಿಕೊಳ್ಳಲು ಸಾಮಾನ್ಯ ಜನರಿಗೆ ನೆರವಾಗಲು ಅಧಿಕಾರಿಗಳು ಹೆಚ್ಚು ಒತ್ತು ನೀಡಬೇಕು. ವಸತಿ ಯೋಜನೆಗಳಲ್ಲಿ ಹೆಚ್ಚಿನ ಪ್ರಗತಿಯಾಗಬೇಕು ಎಂದು ಅವರು ಹೇಳಿದರು.

ಮಹತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೆಚ್ಚು ಕೆಲಸಗಳನ್ನು ತೆಗೆದುಕೊಳ್ಳಬೇಕು. ಈ ಯೋಜನೆಯ ಫಲಾನುಭವಿಗಳಿಗೆ ಜಾಬ್ ಕಾರ್ಡ್ ನೀಡಿ, ಹೆಚ್ಚು ಉದ್ಯೋಗ ಒದಗಿಸಬೇಕು ಎಂದು ಅವರು ಹೇಳಿದರು.

ಜಿಲ್ಲೆಯಾದ್ಯಂತ ಪಡಿತರ ಚೀಟಿಗಾಗಿ 92 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಅದರಲ್ಲಿ 82 ಸಾವಿರ ಅರ್ಜಿಗಳು ದೃಡೀಕೃತಗೊಂಡಿದ್ದು ಪಡಿತರ ಚೀಟಿಯನ್ನು ಅರ್ಜಿದಾರರ ಮನೆಗೆ ತಲುಪಿಸಲಾಗುವುದು. ಶೇ 75%ರಷ್ಟು ನ್ಯಾಯಬೆಲೆ ಅಂಗಡಿಗಳನ್ನು ಪಿಒಎಸ್ ಆಗಿ ಪರಿವರ್ತಿಸಲಾಗಿದೆ ಎಂದು ಆಹಾರ ಸರಬರಾಜು ಇಲಾಖೆಯ ಹಿರಿಯ ಉಪ ನಿರ್ದೇಶಕ ಡಾ. ಕಾ.ರಾಮೇಶ್ವರಪ್ಪ ಅವರು ಸಭೆಗೆ ತಿಳಿಸಿದರು.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಿಥಿಲಗೊಳ್ಳುತ್ತಿರುವ ಹಾಸ್ಟೆಲ್ ನವೀಕರಣ ಮತ್ತು ಅಂಗನವಾಡಿ ಕೇಂದ್ರಗಳಿಗೆ ಗೋಡೆ ಬರಹ, ಮಾತೃಪೂರ್ಣ ಯೋಜನೆ ಅನುಷ್ಠಾನ ಮುಂತಾದ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಬಳಸಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಈ ತಿಂಗಳ ಅಂತ್ಯದಲ್ಲಿ ‘ಮಕ್ಕಳ ಸ್ನೇಹಿ ಶೌಚಾಲಯ’ ಕೆಲಸ ಕಾರ್ಯಗಳನ್ನು ಮುಗಿಸಲು ಸೂಚಿಸಿದರು. ಸಮುದಾಯ ಭವನ ನಿರ್ಮಾಣದಲ್ಲಿ ತಡವಾದರೆ ಅಧಿಕಾರಿಗಳಿಗೆ ದಂಡ ಹಾಕುವುದಾಗಿ ಸಿಇಒ ತಿಳಿಸಿದರು.

ಸರ್ಕಾರದ ವಿವಿಧ ಯೋಜನೆಗಳಡಿ ಸಹಾಯಧನ ಸೌಲಭ್ಯಗಳಿಗೆ 5419 ಅರ್ಜಿ ಬಂದಿದ್ದು, ಅದಕ್ಕಾಗಿ ಜಿಲ್ಲೆಯಲ್ಲಿ 5.40 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಈ ಪೈಕಿ 1324 ಅರ್ಹ ಫಲಾನುಭವಿಗಳಿದ್ದು, ವಿವಿಧ ಬ್ಯಾಂಕ್‍ನವರು ಮಾಹಿತಿ ಕೊರತೆಯಿಂದ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬೀರಿಹುಂಡಿ ಬಸವಣ್ಣ ಅವರು ಹೇಳಿದರು. ಯೋಜನಾ ನಿರ್ದೇಶಕರು ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಪಲಾನುಭವಿಗಳಿಗೆ ತಲುಪುವಂತೆ ಕ್ರಮವಹಿಸಲು ಸಭೆಯಲ್ಲಿ ಸೂಚಿಸಲಾಯಿತು.

ಫಸಲ್ ಬೆಳೆ ವಿಮೆ ಯೋಜನೆ ಅಡಿಯಲ್ಲಿ 2.85 ಕೋಟಿ ರೂ. ಮತ್ತು ಬೆಳೆ ಪರಿಹಾರ ಯೋಜನೆಯಲ್ಲಿ 4.16 ಕೋಟಿ ರೂ ಅನುದಾನ ಇದೆ. ಈ ತಿಂಗಳ ಅಂತ್ಯದೊಳಗೆ ರೈತರಿಗೆ ಈ ಹಣ ತಲುಪುವಂತೆ ಕ್ರಮವಹಿಸಲು ಅಧಿಕಾರಿಗಳಿಗೆ ತಿಳಿಸಲಾಯಿತು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ದಯಾನಂದ್ ಮೂರ್ತಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಲಕ್ಷ್ಮಿ ನಾಗಣ್ಣ, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

(ಎನ್‍ಬಿಎನ್‍)

Leave a Reply

comments

Related Articles

error: