ಮೈಸೂರು

ಪರಿಸರದ ಪಥದೆಡೆಗೆ ದೀಪಾವಳಿ ರಥಕ್ಕೆ ಚಾಲನೆ 

ಮೈಸೂರು, ಅ.೧೨: ಮೈಸೂರ್ ಸೈನ್ಸ್ ಫೌಂಡೇಷನ್ ಮತ್ತು ರೋಟರಿ ಸಂಸ್ಥೆ ಸಹಯೋಗದಲ್ಲಿ ವಿದ್ಯಾರ್ಥಿಗಳಲ್ಲಿ ಮತು ಸಾರ್ವಜನಿಕರಲ್ಲಿ ಪಟಾಕಿ ಸಿಡಿಸುವುದರಿಂದ ಪರಿಸರ ಮತು ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಉಂಟುಮಾಡುವ ಸಲುವಾಗಿ ಪರಿಸರದ ಪಥದೆಡೆಗೆ ದೀಪಾವಳಿ ರಥ ಎಂಬ ಶೀರ್ಷಿಕೆಯುಳ್ಳ ರಥಕ್ಕೆ ಗುರುವಾರ ಚಾಲನೆ ದೊರೆಯಿತು. ರಥಕ್ಕೆ ಬನ್ನೂರಿನ ರೋಟರಿ ಶಾಲೆಯಲ್ಲಿ ಪುರಸಭೆಯ ಕಾರ್ಯನಿರ್ವಹಣಾಧಿಕಾರಿ ಗಂಗಾಧರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಆದರೆ ಅವು ಯಶಸ್ವಿಗೊಳ್ಳಬೇಕಾದರೆ ಮಕ್ಕಳನ್ನು ತಲುಪಬೇಕು. ಆ ನಿಟ್ಟಿನಲ್ಲಿ ಈ ರಥ ಅತ್ಯಂತ ಪರಿಣಾಮಕಾರಿಯಾಗಿದೆ. ಪ್ರತಿದಿನ ವಿದ್ಯಾರ್ಥಿಗಳು ಶಾಲೆಯ ಪ್ರಾರ್ಥನಾ ಸಮಯದಲ್ಲಿ ಸ್ಪಚ್ಛತೆ ಬಗ್ಗೆ ಮಾತನಾಡಬೇಕು. ಮನೆ, ಶಾಲೆ ಮತ್ತು ಸುತ್ತ ಮುತ್ತಲಿನ ಪರಿಸರದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.ಈ ರಥ ಬನ್ನೂರು ಮತ್ತು ಟಿ.ನರಸಿಪುರದ ಸುತ್ತಮುತ್ತಲಿನ ಎಲ್ಲಾ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತದೆ. ಈ ರಥ ಪಟಾಕಿ ಸಿಡಿಸುವುದರಿಂದ ಆಗುವ ಅನಾಹುತಗಳ ಕುರಿತು ಮಾಹಿತಿ ಹಾಗೂ ದೀಪಾವಳಿಯನ್ನು ಹೇಗೆ ಪರಿಸರ ಸ್ನೇಹಿಯಾಗಿ ಆಚರಿಸಬೇಕೆಂಬುದರ ಬಗ್ಗೆ ಬೆಳಕು ಚೆಲ್ಲುತ್ತದೆ. ಈ ಕುರಿತಾದ ಕರಪತ್ರವನ್ನು ಹಂಚಲಾಗುತ್ತದೆ. ಈ ರಥದಲ್ಲಿ ಧ್ವನಿವರ್ಧಕ ಅಳವಡಿಸಿದ್ದು ಅದರಲ್ಲಿ ದೀಪಾವಳಿಯ ಹಿನ್ನಲೆ ಮತ್ತು ಆಚರಣೆ ಕುರಿತು ಮುದ್ರಿಸಿದ ಧ್ವನಿ ಬಿತ್ತರಿಸಲಾಗುತ್ತದೆ. ಈ ರಥ ಅ.೧೨ರಿಂದ ೧೬ರವರೆಗೆ ವಿವಿಧ ಶಾಲಾ ಕಾಲೇಜುಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಿದೆ.ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಬಿ.ಎಸ್.ಯೋಗೇಂದ್ರ, ಮೈಸೂರ್ ಸೈನ್ಸ್ ಫೌಂಡೇಷನ್ ಕಾರ್ಯದರ್ಶಿ ಜಿ.ಬಿ.ಸಂತೋಷ್‌ಕುಮಾರ್, ಎಮ್‌ಎಸ್‌ಎಫ್ ಸದಸ್ಯ ಶ್ರೀಕಂಠಮೂರ್ತಿ, ರೋಟರಿ ಸಂಸ್ಥೆಯ ಮಹೇಂದ್ರ ಸಿಂಗ್ ಕಾಳಪ್ಪ, ಶಾಲೆಯ ಶಿಕ್ಷಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.(ವರದಿ ಬಿ.ಎಂ)

Leave a Reply

comments

Related Articles

error: