ಕರ್ನಾಟಕ

ನಿವೇಶನ ರಹಿತ ಅರ್ಹ ಫಲಾನುಭವಿಗಳನ್ನು ಗುರುತಿಸಿ ನಿವೇಶನ ನೀಡಲಾಗುವುದು : ಕೆ.ಎನ್.ರಾಜಣ್ಣ

ರಾಜ್ಯ(ತುಮಕೂರು)ಅ.12:- ವಸತಿ ಹಾಗೂ ನಿವೇಶನ ರಹಿತ ಅರ್ಹ ಫಲಾನುಭವಿಗಳನ್ನು ಗುರುತಿಸಿ ಡಿಸೆಂಬರ್ ಅಂತ್ಯದೊಳಗೆ ಆಶ್ರಯ ಸಮಿತಿಯಲ್ಲಿ ಆಯ್ಕೆ ಮಾಡಿ ನಿವೇಶನ ನೀಡಲಾಗುವುದು ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.

ಇಲ್ಲಿನ ಪುರಸಭೆಯ ಸಭಾಂಗಣದಲ್ಲಿ ನಡೆದ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಟ್ಟಣದ ವ್ಯಾಪ್ತಿಯಲ್ಲಿ ಈ ಹಿಂದೆ ಮನೆ ಅಥವಾ ನಿವೇಶನ ರಹಿತ ಫಲಾನುಭವಿಗಳನ್ನು ಗುರುತಿಸಿ ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿರುವಂತಹ ವಸತಿ ಹೀನರಿಗೆ ರಾಜೀವ್ ಗಾಂಧಿ ಬಡಾವಣೆಯ ಬಳಿ ಇರುವ ನಾಲ್ಕು ಎಕರೆ ವಿಸ್ತೀರ್ಣ ಜಾಗದಲ್ಲಿ ಹಾಗೂ ಕರಡಿಪುರದಲ್ಲಿ ಹಮಾಲರಿಗೆ ನೀಡಿ ಉಳಿಕೆ ಇರುವ ನಿವೇಶನದ ಜಾಗ ಈ ಎರಡು ಸ್ಥಳಗಳಲ್ಲಿ ಒಟ್ಟು 200 ನಿವೇಶನಗಳನ್ನು ವಿಂಗಡಿಸಿ ಫಲಾನುಭವಿಗಳಿಗೆ ವಿತರಿಸಲಾಗುವುದು. ಈಗಾಗಲೇ 2 ಸಾವಿರ ನಿವೇಶನ ರಹಿತ ಅರ್ಜಿಗಳು ಬಂದಿದ್ದು, ಅವುಗಳನ್ನು ಪರಿಶೀಲಿಸಿ ಡಿಸೆಂಬರ್ ಅಂತ್ಯದೊಳಗೆ ಹಂಚಿಕೆ ಮಾಡಲಾಗುವುದು ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ.ವೆಂಕಟೇಶಯ್ಯ, ತಹಶೀಲ್ದಾರ್ ಹೆಚ್. ಶ್ರೀನಿವಾಸ್, ಮುಖ್ಯಾಧಿಕಾರಿ ಪಿ.ಎಸ್. ಮಾರುತಿ ಶಂಕರ್, ಪುರಸಭಾಧ್ಯಕ್ಷೆ ಎಲ್.ರಾಧ, ಉಪಾಧ್ಯಕ್ಷ ಎಂ.ಪಿ. ಗಣೇಶ್, ಸಮಿತಿಯ ಸದಸ್ಯರಾದ ಎಂ.ಎಸ್. ಶಂಕರ್ ನಾರಾಯಣ್, ಶ್ರೀರಾಮಬಾಬು, ಚಿಕ್ಕಣ್ಣ, ಸಮುದಾಯ ಸಂಘಟಕಿ ವರಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: