ಮೈಸೂರು

ಇಂದಿನ ರಾಜಕಾರಣ ಸುಳ್ಳಿನ ಮೇಲೆ ನಿಂತಿದೆ: ದೇವನೂರು ಮಹಾದೇವ

ಇಂದು ನಾವು ಮನುಷ್ಯನನ್ನು ಮನುಷ್ಯ ಎಂದು ನೋಡಬೇಕಾಗಿದೆ. ಹಿಡಿತಕ್ಕೆ ಸಿಗದೆ ಅಡ್ಡಾದಿಡ್ಡಿ ಓಡುತ್ತಿರುವ ಅಭಿವೃದ್ಧಿಗೆ ಸಮಾನತೆಯ ಅಳತೆಗೋಲು ಅಳವಡಿಸಿ ನೋಡಿದಾಗ ಮಾತ್ರವೇ ನಮ್ಮ ಸಂವಿಧಾನದ ಮುನ್ನುಡಿಯ ಆಶಯಗಳಾದ ನ್ಯಾಯ, ಸ್ವಾತಂತ್ರ್ಯ, ಸಹೋದರತೆಗಳು ಉಸಿರಾಡುತ್ತವೆ ಎಂದು ಸಾಹಿತಿ ದೇವನೂರು ಮಹಾದೇವ ಅಭಿಪ್ರಾಯಪಟ್ಟರು.

ಭಾನುವಾರ ನಗರದ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಜನಾಂದೋಲನಗಳ ಮಹಾಮೈತ್ರಿಯ ಘೋಷಣಾ ಸಮಾವೇಶದಲ್ಲಿ ಆಶಯ ನುಡಿಗಳನ್ನಾಡಿದ ಅವರು, ಇಂದಿನ ರಾಜಕಾರಣ ಸುಳ್ಳಿನ ಮೇಲೆ ನಿಂತಿದೆ. ಪಾಶ್ಚಿಮಾತ್ಯರು ನಮ್ಮ ರಾಜಕಾರಣವನ್ನು ಸತ್ಯೋತ್ತರ ರಾಜಕಾರಣ ಎಂದು ವಿಶ್ಲೇಷಣೆ ಮಾಡುತ್ತಿದ್ದಾರೆ. ಜಗತ್ತಿನ ಮುಕ್ಕಾಲು ಭಾಗ ಈ ರೀತಿಯೇ ಜರುಗತ್ತಿದೆ. ಸತ್ಯೋತ್ತರ ರಾಜಕಾರಣ ಸತ್ಯದ ತದನಂತರದ ಸೂಕ್ಷ್ಮ ಸತ್ಯದ ರಾಜಕಾರಣವಾಗಬೇಕಿತ್ತು. ಆದರೆ, ಇಂದು ಸತ್ಯದ ರಾಜಕಾರಣವನ್ನು ಭೂಗತ ಮಾಡಿ ಅದರ ಮೇಲೆ ಮಿಥ್ಯದ ರಾಜಕಾರಣ ರಾರಾಜಿಸುತ್ತಿರುವುದು ಆಘಾತಕಾರಿ ಎಂದು ಬೇಸರ ವ್ಯಕ್ತಪಡಿಸಿದರು.

ಸಂಪತ್ತಿನ ಕೇಂದ್ರೀಕರಣವು ಇಂದು ಕೆಲವೇ ವ್ಯಕ್ತಿಗಳಲ್ಲಿ ಎಂದೂ ಇಲ್ಲದಷ್ಟು ಕೇಂದ್ರೀಕರಿಸಲ್ಪಟ್ಟಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ, ಸಂಪತ್ತನ್ನು ದೋಚಿ ಅದರ ಮೇಲೆ ಕುಳಿತಿರುವ ವ್ಯಕ್ತಿಗೂ ಪಾತಾಳ ಆಕಾಶದಷ್ಟು ಅಂತರ ಹೆಚ್ಚಾಗಿದೆ. ಈ ಸಮಾನತೆಯ ಅಬ್ಬರದಲ್ಲಿ ಪ್ರಜಾಪ್ರಭುತ್ವ ತತ್ತರಿಸಿ ಹೋಗಿದೆ. ಸಮಾನತೆಯನ್ನೇ ಅವಲಂಬಿಸಿ ಜೀವ ಪಡೆಯುವ ಪ್ರಜಾಪ್ರಭುತ್ವ, ಪ್ರಜಾಪ್ರಭುತ್ವವನ್ನೇ ಅವಲಂಬಿಸಿ ಜೀವ ಪಡೆಯುವ ನ್ಯಾಯ, ಸ್ವಾತಂತ್ರ್ಯ, ಸಹೋದರತೆಗಳು ಅಸಮಾನತೆಯ ಹೊಡೆತಕ್ಕೆ ನಲುಗಿ ಹೋಗಿವೆ. ಇಂದು ಬಂಡವಾಳ ಸೃಷ್ಟಿಸಿರುವ ಸಂಬಂಧ ಅತ್ಯಂತ ಕ್ರೂರವಾಗಿದ್ದು ಮನುಷ್ಯರನ್ನು ಬಳಸಿಕೊಂಡು ವಸ್ತುಗಳನ್ನು ಪ್ರೀತಿಸುತ್ತಿದ್ದೇವೆ. ವಸ್ತುಗಳೇ ಮನುಷ್ಯರನ್ನು ಕೊಂಡುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಜನಾಂದೋಲನಗಳು ತುಕ್ಕು ಹಿಡಿದಿವೆ: ಜನತೆಯ ಆಶೋತ್ತರಗಳಿಗೆ ಧ್ವನಿಯಾಗುವ, ಸಮಸ್ಯೆಗಳಿಗೆ ಸ್ಪಂದಿಸುವ ಜನಾಂದೋಲನಗಳು ಇಂದು ತುಕ್ಕು ಹಿಡಿದಿವೆ. ಬಹುತೇಕ ಜನಾಂದೋಲನಗಳು ಟ್ರೇಡ್ ಯೂನಿಯನ್ ಸ್ವಭಾವ ಪಡೆದುಕೊಂಡು ಬಾವಿಯ ಕಪ್ಪೆಗಳಂತಾಗಿವೆ. ಬಿಡಿಯಾಗಿರುವ ಆಂದೋಲನಗಳು ಇಡಿಯಾಗಿ ನೋಡುವ ಕಣ್ಣೋಟ ಮತ್ತು ಗ್ರಹಿಕೆಗಳನ್ನು ಜನಾಂದೋಲನಗಳು ಪಡೆದುಕೊಳ್ಳಬೇಕಾಗಿದೆ. ಇಂಥದ್ದೇ ಕನಸಿನಲ್ಲಿ ಮಹಾಮೈತ್ರಿ ಹುಟ್ಟಿಕೊಂಡಿದ್ದು ಸಮಾನತೆಗಾಗಿನ ಹೋರಾಟಕ್ಕೆ ಜೀವ ಪಡೆದುಕೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ಚಿಂತಕ ರಹಮತ್ ತರೀಕೆರೆ, ಜನಸಂಗ್ರಾಮ ಪರಿಷತ್‌ನ ರಾಘವೇಂದ್ರ ಕುಷ್ಟಿ, ಎಸ್.ಆರ್.ಹಿರೇಮಠ್, ಚುಕ್ಕಿ ನಂಜುಂಡಸ್ವಾಮಿ, ರವಿಕೃಷ್ಣಾರೆಡ್ಡಿ, ರೂಪ ಹಾಸನ್, ಕೆ.ಟಿ.ಗಂಗಾಧರ್, ರಾಜೀವ್, ನೂರ್ ಶ್ರೀಧರ್, ದೊಡ್ಡಿಪಾಳ್ಯ ನರಸಿಂಹಮೂರ್ತಿ, ಯತಿರಾಜ್, ಚಂದ್ರಶೇಖರ ಬಾಳೆ, ಸುಮನಾ, ಬಡಗಲಪುರ ನಾಗೇಂದ್ರ, ಅಭಿರುಚಿ ಗಣೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: