ಮೈಸೂರು

ವಿದ್ಯೆ ಸಾಧನೆಯ ಸ್ವತ್ತು, ಸೋಮಾರಿಯ ಸ್ವತ್ತಲ್ಲ, ಸಂಸ್ಕಾರ ಅರಿತು, ಸಾಧನೆಯ ಹಾದಿಯಲ್ಲಿ ನಡೆಯಿರಿ : ಮುಮ್ಮಡಿ ಶಿವರುದ್ರಸ್ವಾಮೀಜಿ

ಮೈಸೂರು, ಅ.12:-  ವಿದ್ಯೆ ಸಾಧನೆಯ ಸ್ವತ್ತು, ಸೋಮಾರಿಯ ಸ್ವತ್ತಲ್ಲ, ನಮ್ಮ ಸಂಸ್ಕಾರ ಅರಿತು, ಸಾಧನೆಯ ಹಾದಿಯಲ್ಲಿ ನಡೆಯಿರಿ ಎಂದು ಮರಳೆಗವಿ ಮಠದ ನಿ. ಪ್ರ. ಸ್ವ. ಮುಮ್ಮಡಿ ಶಿವರುದ್ರಸ್ವಾಮೀಜಿ ತಿಳಿಸಿದರು.

ಮೈಸೂರಿನ ಸರಸ್ವತಿಪುರಂ ಜೆಎಸ್‍ಎಸ್ ಮಹಿಳಾ ಕಾಲೇಜು (ಸ್ವಾಯತ್ತ), ಹಾಗೂ ಜೆಎಸ್‍ಎಸ್ ಮಹಿಳಾ ಪದವಿಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಪರಮಪೂಜ್ಯ ಜಗದ್ಗುರು ರಾಜಗುರುತಿಲಕ ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ‘102ನೇ ಜಯಂತಿ ಮಹೋತ್ಸವ ಸಮಾರಂಭ’ ಮತ್ತು ‘ನುಡಿ ನಮನ’ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.  ಬಳಿಕ ಮಾತನಾಡಿದ ಅವರು  ಸ್ವಚ್ಛ, ಶಿಸ್ತು, ಸಂಸ್ಕೃತಿ ಮತ್ತು ನಡೆ-ನುಡಿ, ಗೌರವಕ್ಕೆ ಜೆಎಸ್‍ಎಸ್ ಸಂಸ್ಥೆಯಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ಇದೆ. ಮಠಗಳಿಂದ ಪ್ರಗತಿಪರ ಸಂಪ್ರದಾಯ ಆಚರಣೆಯಲ್ಲಿದೆ. ಯಾರೂ ಧರ್ಮದ ಬಗ್ಗೆ ಹಗುರವಾಗಿ ಮಾತನಾಡಬಾರದು. ‘ಭಾರತ ಬಹುಮುಖಿ ಮತ್ತು ವೈವಿಧ್ಯತೆಯಿಂದ ಕೂಡಿದ ಸಮಾಜ’, ದೂರದೃಷ್ಟಿ, ಮೌಲ್ಯಗಳ ಚೌಕಟ್ಟಿನಲ್ಲಿ, ರಾಷ್ಟ್ರಮಟ್ಟದ ಅಭ್ಯುದಯಕ್ಕೆ ಮಠ ಮಾನ್ಯಗಳು ದುಡಿಯುತ್ತಿವೆ. ಮಹಾತ್ಮರು ‘ಲೋಕದಂತೆ ಬಾರರು, ಇರರು ಹಾಗೂ ಹೋಗರು’, ಇವರು ‘ಎಲೆ ಮರೆ ಕಾಯಿಯಂತೆ’, ಇವರು ಜಗತ್ತಿಗೆ ಕೊಟ್ಟಂತಹ ಕೊಡುಗೆ ಅಪಾರ. ಯಾವ ಮತ್ತು ಯಾರ ಪ್ರತಿಫಲಾಪೇಕ್ಷೆ ಇಲ್ಲದೆ ಪ್ರಸಾದ, ಶಿಕ್ಷಣ ಹಾಗೂ ಆರೋಗ್ಯದ ನಿಟ್ಟಿನಲ್ಲಿ ಶಾಶ್ವತ ಕೆಲಸ ಮಾಡುತ್ತಿದ್ದಾರೆ ಎಂದರು. ಹುಟ್ಟು ಸಾವುಗಳ ಮಧ್ಯೆ ಶಾಶ್ವತ ಕೆಲಸ ಮಾಡಬೇಕು. ಪ್ರತಿಯೊಬ್ಬರು ನಾನು ಈ ಜಗತ್ತಿಗೆ ಬಂದು ಏನನ್ನು ಸಾಧಿಸಿದ್ದೇನೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು  ಎಂದು ಆರ್ಶೀವಚನ ನೀಡಿದರು. ಸಮಾರಂಭದಲ್ಲಿ ‘ನುಡಿನಮನ’ ಸಲ್ಲಿಸಿದ ಮೈಸೂರಿನ ಮಹಿಳಾ ಕಲಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ  ಡಾ. ಬಿ. ವಿ. ವಸಂತಕುಮಾರ್ ಮಾತನಾಡಿ ಪರಮಪೂಜ್ಯ ಜಗದ್ಗುರು ರಾಜಗುರುತಿಲಕ ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಸಾಧನೆ ಅಪಾರ, ನಿಜವಾದ ಚಾರಿತ್ರ್ಯದಿಂದ ಮೇಲಕ್ಕೇರಿದವರು. ಸಮಾಜವೇ ನನ್ನದು, ಸಮಾಜದ ಉದ್ಧಾರವೇ ನನ್ನದು ಎಂಬುದನ್ನು ಅರಿತು, ನಿಸ್ವಾರ್ಥ ಬದುಕನ್ನು ಕಟ್ಟಿಕೊಂಡವರು, ಅವರ ಅರಿವಿನ ಜೋಳಿಗೆ ಹುಟ್ಟಿನಿಂದ ಏಳಿಗೆ ತಂದಿದೆ. ಬಾಲ್ಯದಲ್ಲೇ ಗ್ರಾಮೀಣ ಪ್ರದೇಶದ ಮಕ್ಕಳಿಗೆ, ದೀನದಲಿತರಿಗೆ, ಉಚಿತ ಶಿಕ್ಷಣ ಹಾಗೂ ಅನ್ನದಾಸೋಹವನ್ನು ನೀಡಿದವರು, ಮೇರು ವ್ಯಕ್ತಿತ್ವ ಹೊಂದಿದವರು. ಸೇವೆ, ತ್ಯಾಗಕ್ಕೆ ನಿಜವಾದ ಸ್ವಾಮೀಜಿಗಳು. ಕರ್ನಾಟದಲ್ಲಿ ಮಾತ್ರವಲ್ಲದೆ,  ಇಡೀ ದೇಶಕ್ಕೆ ಜೆಎಸ್‍ಎಸ್ ಜೀವದ್ರವ್ಯವಿದ್ದಂತೆ. ಪೂಜ್ಯರು ಒಂದು ವ್ಯಕ್ತಿಯಲ್ಲ, ಶಕ್ತಿ ಎಂದರು. ಲೋಕಕಲ್ಯಾಣಕ್ಕಾಗಿ ಸೇವೆಗೈಯುತ್ತಿರುವ ಸುತ್ತೂರು ಶ್ರೀಮಠದ ಸಂಸ್ಥಾಪನೆ ಮಹತ್ವಪೂರ್ಣವಾದುದು. ಜಾತಿ  ವರ್ಗ ಭೇದವಿಲ್ಲದೆ ಸ್ವಾಮೀಜಿಯವರು ಜನರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಅಧ್ಯಾತ್ಮದ ಹಿನ್ನೆಲೆಯಲ್ಲಿ ಲೋಕಸೇವೆಯ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ, ಹೆಂಚಿನ ಮನೆಯಿಂದ ಬಂದ ಈ ಚಿಕ್ಕ ಸಂಸ್ಥೆ ಇಂದು ಬೃಹದಾಕಾರವಾಗಿ ಬೆಳೆದು, ಇಡೀ ವಿಶ್ವಕ್ಕೆ ಜ್ಞಾನದ ಬೆಳಕನ್ನು ನೀಡುತ್ತಿದೆ. ಆದರ್ಶ, ತಾಯ್ತನದ ಅಂತಕರಣ, ಪ್ರೀತಿ, ಮೌಲ್ಯಗಳನ್ನು ತುಂಬಿಕೊಂಡು ‘ಅಂತರಾತ್ಮದ ಆಲಯ’ ವಾಗಿದ್ದವರು ಪೂಜ್ಯಶ್ರೀಗಳು. ಅನ್ನ, ಅರಿವು ಮತ್ತು ಆರೋಗ್ಯದ ಕ್ರಾಂತಿಗೆ ಅಡಿಪಾಯ ಕೊಟ್ಟವರು, ಬದುಕುವ ಮತ್ತು ಬದುಕಿಸುವ ಮಾರ್ಗ ತೋರಿದವರು ಪೂಜ್ಯಶೀಗಳವರು ಎಂದು ‘ನುಡಿ ನಮನ’ ಸಲ್ಲಿಸಿದರು.   ಮೈಸೂರು ಮಹಾನಗರಪಾಲಿಕೆಯ ಸ್ಥಾಯಿ ಸಮಿತಿ ಲೆಕ್ಕಪತ್ರ ವಿಭಾಗದ ಅಧ್ಯಕ್ಷರು ಮತ್ತು ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಎನ್. ಎಸ್. ಸೀಮಾಪ್ರಸಾದ್‍ ಪ್ರತಿಭಾ ಹಾಗೂ ದತ್ತಿ ಪುರಸ್ಕಾರವನ್ನು ವಿದ್ಯಾರ್ಥಿನಿಯರಿಗೆ ನೀಡಿದರು.  ಪಿ.ಹೆಚ್‍ಡಿ. ಪದವಿಯನ್ನು ಪಡೆದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಸ್. ಪಿ. ಉಮಾದೇವಿ ಇವರನ್ನು ಈ ಸಂದರ್ಭದಲ್ಲಿ ಕಾಲೇಜಿನ ವತಿಯಿಂದ ಗೌರವಿಸಲಾಯಿತು. ನಿತಿನ್ ರಾಜಾರಾಮಶಾಸ್ತ್ರಿ ಮತ್ತು ತಂಡದವರು ‘ಗೀತ ನಮನ’ ಕಾರ್ಯಕ್ರಮ ನಡೆಸಿಕೊಟ್ಟು, ಪ್ರಾರ್ಥನೆ ಸಲ್ಲಿಸಿದರು.

ಜೆಎಸ್‍ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ವಿ. ಸುರೇಶ, ಕಾಲೇಜಿನ ಶೈಕ್ಷಣಿಕ ಡೀನ್ ಡಾ. ಹೆಚ್. ಬಿ. ಸುರೇಶ್, ಜೆಎಸ್‍ಎಸ್ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಂ.ಪಿ. ರಾಜೇಶ್ವರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: