ಕರ್ನಾಟಕಪ್ರಮುಖ ಸುದ್ದಿ

ಗುಂಡಿ ಬಿದ್ದಿರುವ ರಸ್ತೆಗಳು ಕಾಂಗ್ರೆಸ್ ಸರ್ಕಾರದ ಕೆಟ್ಟ ಆಡಳಿತಕ್ಕೆ ಕೈಗನ್ನಡಿ : ಬಿ.ಎಸ್.ಯಡಿಯೂರಪ್ಪ

ರಾಜ್ಯ(ಬೆಂಗಳೂರು)ಅ.21:-  ಬೆಂಗಳೂರು ನಗರದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳು ಕಾಂಗ್ರೆಸ್ ಸರ್ಕಾರದ ಕೆಟ್ಟ ಆಡಳಿತಕ್ಕೆ ಕೈಗನ್ನಡಿ ಹಿಡಿದಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದರು.

ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಜನರ ಅಹವಾಲು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರದ ಇತಿಹಾಸದಲ್ಲೇ ರಸ್ತೆಗಳು ಎಂದೂ ಈ ರೀತಿ ಕೆಟ್ಟು ಹಾಳಾಗಿರಲಿಲ್ಲ ಎಂದು ಟೀಕಿಸಿ, ರಸ್ತೆಗಳು ಹಾಳಾಗಲು ಕಾಂಗ್ರೆಸ್ ಸರ್ಕಾರದ ಕಳಪೆ ಆಡಳಿತವೇ ಕಾರಣ ಎಂದು ಹರಿಹಾಯ್ದರು. ರಸ್ತೆಗಳ ಅಭಿವೃದ್ಧಿ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ಹಣವನ್ನು ಲೂಟಿ ಮಾಡಿದೆ. ನಾಲ್ಕು ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿರುವುದಾಗಿ ಸರ್ಕಾರ ಹೇಳಿದೆ. ಹಣ ಎಲ್ಲಿ ಹೋಯಿತು, ಯಾರ ಜೇಬು ಸೇರಿದೆ ಎಂದು ಅವರು ಪ್ರಶ್ನಿಸಿದರು. ನಗರದ ಬಹುತೇಕ ರಸ್ತೆಗಳು ಗುಂಡಿ ಬಿದ್ದಿವೆ. ಸುಮಾರು 16 ಸಾವಿರ ಗುಂಡಿಗಳಿರಬಹುದು ಎಂದು ಅಂದಾಜಿಸಲಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ರಸ್ತೆ ಹಾಳಾಗಲು ಕಾರಣ ಯಾರು, ಮಾತೆತ್ತಿದರೆ ಸಾವಿರಾರು ಕೋಟಿ ರೂ. ಮಾತನಾಡುವ ಸಿದ್ಧರಾಮಯ್ಯ ಯಾವ ರೀತಿ ಅಭಿವೃದ್ಧಿ ನಡೆಸಿದ್ದಾರೆ ಎಂಬುದನ್ನು ಹಾಳಾಗಿರುವ ರಸ್ತೆಗಳೇ ತೋರಿಸುತ್ತಿವೆ ಎಂದರು. ವಿರೋಧ ಪಕ್ಷಗಳು ಸುಮ್ಮನೆ ಆರೋಪ ಮಾಡುತ್ತವೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ನೀವೇ ನೋಡಿ ರಸ್ತೆಗಳು ಎಷ್ಟು ಹಾಳಾಗಿವೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ರಸ್ತೆ ತೋರಿಸಿದ ಅವರು ಸತ್ಯ ಹೇಳಿದರೆ ಸಿದ್ಧರಾಮಯ್ಯನವರಿಗೆ ಸಿಟ್ಟು ಬರುತ್ತದೆ ಎಂದರು. ಹಾಳಾಗಿರುವ ರಸ್ತೆಗಳಿಂದ 7-8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇವರ ಸಾವಿಗೆ ಸರ್ಕಾರವೇ ಹೊಣೆ ಎಂದು ದೂರಿದರು. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ್‌ಶೆಟ್ಟರ್, ಬೆಂಗಳೂರಿನ ಹಾಳಾಗಿರುವ ರಸ್ತೆಗಳು ಸಿದ್ಧರಾಮಯ್ಯನವರ ಆಡಳಿತ ವೈಫಲ್ಯವನ್ನು ಬಿಂಬಿಸಿವೆ. ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿ ಬೆಂಗಳೂರಿನ ನರಕ ಸದೃಶ್ಯ ರಸ್ತೆಗಳ ಬಗ್ಗೆ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಸದನದಲ್ಲಿ ಹೋರಾಟ ನಡೆಸುತ್ತದೆ ಎಂದರು. ನಗರದ ನರಕ ಸದೃಶ್ಯ ರಸ್ತೆಗಳಿಂದ ಹಲವಾರು ನಾಗರೀಕರು ಸತ್ತಿದ್ದಾರೆ. ಈ ಸಾವಿಗೆ ಕಾಂಗ್ರೆಸ್ ಸರ್ಕಾರವೇ ಕಾರಣ. ಈ ಸಾವು ನ್ಯಾಯವೇ ಎಂದು ಪ್ರಶ್ನಿಸಿದ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ನಿದ್ರೆಯಲ್ಲಿರುವ ಸಿದ್ಧರಾಮಯ್ಯ ಅವರು ಈಗಲಾದರೂ ಎಚ್ಚೆತ್ತು ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಲಿ ಎಂದರು. ಈ ನಗರ ಪ್ರದಕ್ಷಿಣೆ ಸಂದರ್ಭದಲ್ಲಿ ಯಡಿಯೂರಪ್ಪನವರ ಜತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್‌ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯನಾಯ್ಡು, ಬಿಬಿಎಂಪಿಯ ನಗರ ಪಾಲಿಕೆ ಸದಸ್ಯರು ಸೇರಿದಂತೆ ಹಲವು ಮುಖಂಡರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: