ಮೈಸೂರುಸಿಟಿ ವಿಶೇಷ

ಶೌಚಾಲಯವಾಗಿ ಮಾರ್ಪಟ್ಟ ಪುಲಿಕೇಶಿ ರಸ್ತೆಯ ವಾಚನಾಲಯ!

ಮೈಸೂರಿನ ಕೇಂದ್ರ ಗ್ರಂಥಾಲಯವು ಶತಮಾನ ಪೂರೈಸಿರುವ ಸಂಗತಿ ನಿಮಗೆಲ್ಲ ಗೊತ್ತೇ ಇದೆ. ಈ ನಡುವೆ ಗ್ರಂಥಾಲಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ಮತ್ತಷ್ಟು ಅಭಿವೃದ್ಧಿಗೊಳಿಸುವುದಾಗಿ ಸರ್ಕಾರ ಹಾಗೂ ಅಧಿಕಾರಿಗಳು ಹೇಳ್ತಿದ್ದಾರೆ. ಆದರೆ, ಮೈಸೂರಿನ ಪುಲಕೇಶಿ ರಸ್ತೆಯಲ್ಲಿರುವ ವಾಚನಾಲಯ ನೋಡಿದರೆ ಈ ಸುದ್ದಿ ಓದುವ ನಿಮಗೂ ಬೇಸರವೆನಿಸಬಹುದು. ಕಾರಣ ಇಲ್ಲಿನ ವಾಚನಾಲಯ ಕಸದ ತೊಟ್ಟಿಯಾಗಿ ಶೌಚಾಲಯದ ಮನೆಯಾಗಿ ಪರಿವರ್ತನೆಯಾಗಿದೆ. ಬೇಸರದ ಸಂಗತಿ ಎಂದರೆ, ಇದರ ಮುಂಭಾಗದಲ್ಲೇ ಮಾಂಸ ಮಾರಾಟದ ಅಂಗಡಿ ಇದ್ದು, ಇಲ್ಲಿಯ ತ್ಯಾಜ್ಯವನ್ನೆಲ್ಲ ವಾಚನಾಲಯದ ಪಕ್ಕ ಇರುವ ಖಾಲಿ ಜಾಗದಲ್ಲೇ ಸುರಿಯಲಾಗುತ್ತಿದೆ.

ಶಾಲೆ ಇದ್ದರೂ ಡೊಂಟ್ ಕೇರ್…

library-web-2ವಾಚನಾಲಯಕ್ಕೆ ಹೊಂದಿಕೊಂಡಂತೆ ಸರ್ಕಾರಿ ಶಾಲೆ ಇದೆ. 1 ರಿಂದ 10ನೇ ತರಗತಿಯವರೆಗೂ ಈ ಶಾಲೆಯಲ್ಲಿ ಓದುತ್ತಿರುವ ಮಕ್ಕಳಲ್ಲಿ 8ನೇ ತರಗತಿಯಿಂದ 10ನೇ ತರಗತಿಯವರೆಗೂ ಬಾಲಕಿಯರ ಶಾಲೆಯಾಗಿದೆ. ಅವಿವೇಕಿಗಳು ಇಲ್ಲಿ ನಿತ್ಯ ಮೂತ್ರವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದ ಈ ಪ್ರದೇಶದಲ್ಲಿ ಸಹಿಸಲಾರದ ದುರ್ವಾಸನೆ ಆವರಿಸಿದೆ. ಎಷ್ಟೋ ಬಾರಿ ವಿದ್ಯಾರ್ಥಿನಿಯರು ಮುಜುಗರಕ್ಕೆ ಒಳಪಟ್ಟು ಈ ಕಷ್ಟವನ್ನ ಯಾರಿಗೂ ಹೇಳಿಕೊಳ್ಳದೆ ಮುಂದೆ ಸಾಗುತ್ತಾರೆ.

ಇದೇ ವೇಳೆ ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿನಿಯೊಬ್ಬಳು ‘ಸಿಟಿಟುಡೆ’ಯೊಂದಿಗೆ ಮಾತನಾಡಿ, ಸರ್ ಇಲ್ಲಿ ನಿತ್ಯವೂ ಇದೇ ಗೋಳಾಗಿದೆ. ಕೇಳುವವರಿಲ್ಲ – ಹೇಳುವವರೂ ಇಲ್ಲ. ನಾವು ಎಷ್ಟೋ ಬಾರಿ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು  ಬೋರ್ಡ್ ಹಿಡಿದು ನಾನೂ ನನ್ನ ಫ್ರೆಂಡ್ಸ್ ಎಲ್ಲರೂ ಅರಿವು ಮೂಡಿಸುವ ಕೆಲಸಕ್ಕೆ ಮುಂದಾಗುತ್ತೇವೆ. ಆದರೆ, ನಮ್ಮ ಶಾಲೆ ಪಕ್ಕದಲ್ಲೇ ಈ ರೀತಿ ನಡೆಯುತ್ತಿದೆ. ವಾಚನಾಲಯ ಪಾಳು ಬಿದ್ದಿರುವುದರಿಂದ ಯಾರೂ ಇತ್ತ ತಿರುಗಿ ನೊಡುವುದಿಲ್ಲ. ಇಲ್ಲಿ ಮೂತ್ರವಿಸರ್ಜನೆ ಮಾಡುವುದರಿಂದ ಮತ್ತು ತ್ಯಾಜ್ಯ ತಂದು ಸುರಿಯುತ್ತಿರುವುದರಿಂದ ಇಲ್ಲಿ ತಿರುಗಾಡುವುದೇ ಯಾತನಾಮಯವಾಗಿದೆ ಎಂದು ವಿದ್ಯಾರ್ಥಿನಿ ಆಕ್ರೋಶ ವ್ಯಕ್ತಪಡಿಸಿದಳು.

“ನಮ್ಮ ಕಂಟ್ರೋಲ್ ಗೆ ಬರೋದಿಲ್ಲ…”

ಇದು ಸಾರ್ವಜನಿಕ ಗ್ರಂಥಾಲಯ ಇಲಾಖೆಗೂ ಒಳಪಟ್ಟಿಲ್ಲ. ಕಾರಣ ನಗರ ಪಾಲಿಕೆ ಸದಸ್ಯರು ತಮ್ಮ ವಾರ್ಡುಗಳಲ್ಲಿ ನಾಗರಿಕರ ಓದುವ ಹಂಬಲ ನೀಗಿಸಲು ಈ ರೀತಿಯ ವಾಚನಾಲಯಗಳನ್ನು ತೆರೆಯುತ್ತಾರೆ. ಇದರಿಂದ ಸಂಪೂರ್ಣ ಜವಬ್ದಾರಿಯನ್ನ ಪಾಲಿಕೆ ಸದಸ್ಯರೇ ನಿರ್ವಹಿಸಬೇಕಾಗುತ್ತದೆ.

ಹಾಗೊಮ್ಮೆ ನಿರ್ವಹಣೆ ಕಷ್ಟಸಾಧ್ಯ ಎಂದಾದರೆ, ವಾಚನಾಲಯ ನಿಯಮದಂತೆ ಗ್ರಂಥಾಲಯ ಇಲಾಖೆಯ ಸುಪರ್ದಿಗೆ ವಹಿಸಬೇಕಾಗುತ್ತದೆ. ಆದರೆ ಇದನ್ನು ಗ್ರಂಥಾಲಯ ಇಲಾಖೆಗೂ ಒಪ್ಪಿಸದೆ, ಇತ್ತ ಪಾಲಿಕೆ ವತಿಯಿಂದಲೂ ನಿರ್ವಹಿಸದೆ ಪಾಳು ಮನೆಯಾಗಿಸಿದ್ದಾರೆ. ಇದರಿಂದ ನಮ್ಮ ವ್ಯಾಪ್ತಿಗೆ ಒರೋದಿಲ್ಲ ಅಂತಾರೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಮೈಸೂರು ನಗರ ಹಾಗೂ ಜಿಲ್ಲಾ ವಿಭಾಗದ ಮುಖ್ಯಸ್ಥರಾದ ಮುಂಜುನಾಥ್ ಅವರು.

“ಶೀಘ್ರದಲ್ಲೇ ಬರಲಿದೆ ನೂತನ ಕಟ್ಟಡ…”

library-web-3ಇನ್ನು ‘ಸಿಟಿಟುಡೆ’ಯೊಂದಿಗೆ ಮಾತನಾಡಿದ ವಾರ್ಡ್ ನಂಬರ್ 42ರ ಪಾಲಿಕೆ ಸದಸ್ಯ ರಾಮು ಅವರು, ಈ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ಹಳೆಯ ಪಾಳುಬಿದ್ದ ಕಟ್ಟಡವನ್ನು ಕೆಡವಿ ಅಲ್ಲೊಂದು ದೊಡ್ಡದಾದ ಗ್ರಂಥಾಲಯ ಮಾಡಲು ನಿರ್ಧರಿಸಿದ್ದೇನೆ. ನನಗೂ ಕೂಡ ಈ ಬಗ್ಗೆ ದೂರುಗಳು ಕೇಳಿ ಬಂದಿವೆ. ಇದೀಗ ನೀವೂ ನನ್ನ ಗಮನ ಸೆಳೆದಿದ್ದೀರಿ. ಆದಷ್ಟು ಬೇಗ ಈ ಕಾರ್ಯ ಮಾಡುತ್ತೇವೆ ಎನ್ನುತ್ತಾರೆ.

ಇಲ್ಲೊಂದು ಶೌಚಾಲಯದ ಅಗತ್ಯವಿದೆ…

ಹೆಣ್ಣು ಮಕ್ಕಳು ಹಾಗೂ ನಾಗರಿಕರಿಗೆ ಮುಜುಗರ ತಪ್ಪಿಸುವ ಕೆಲಸ ಶೀಘ್ರವಾಗಿ ಆಗಬೇಕಿದೆ. ಹಾಗಾಗಬೇಕಾದರೆ ಇಲ್ಲೊಂದು ಶೌಚಾಲಯವೂ ನಿರ್ಮಾಣವಾಗಬೇಕು. ಹಾಗೆ ನೋಡಿದರೆ ಈ ಶಬ್ದಭರಿತ ಹಾಗೂ ಧೂಳು ತುಂಬಿದ ರಸ್ತೆಯ ಪಕ್ಕದಲ್ಲಿ ದೀರ್ಘ ಸಮಯ ಕುಳಿತು ಓದಿನಲ್ಲಿ ತಲ್ಲೀನರಾಗುವುದು ತುಸು ಕಷ್ಟವೇ ಹೌದು. ಪಾಳುಬಿದ್ದಿರುವ ಈ ಜಾಗದಲ್ಲಿ ಶೌಚಾಲಯ ನಿರ್ಮಿಸಿ ಪಾಲಿಕೆ ಸದಸ್ಯ ರಾಮು ಅವರು ಹತ್ತಿರದಲ್ಲೇ ಪ್ರಶಾಂತಮಯ ವಾತಾವರಣವಿರುವ ಸ್ಥಳವೊಂದನ್ನು ಪಡೆದು ಅಲ್ಲಿ ಗ್ರಂಥಾಲಯ ನಿರ್ಮಿಸಿದರೆ ಸೂಕ್ತವೆನಿಸುತ್ತದೆ.

ಒಟ್ಟಿನಲ್ಲಿ ಪಾಳು ಬಿದ್ದ ವಾಚನಾಲಯ ಮತ್ತು ಅದರ ಸುತ್ತಮುತ್ತ ದುರ್ವಾಸನೆ ಬೀರುತ್ತಿರುವ ವಾತಾವರಣ ತೆರವಾಗಿ ವಿದ್ಯಾರ್ಥಿಗಳು, ಜನಸಾಮಾನ್ಯವರು ಯಾವುದೇ ತೊಂದರೆಯಿಲ್ಲದೆ ಓಡಾಡುವಂತಾಗಲಿ, ಜನರ ಪ್ರಕೃತಿ ಕರೆ ನೀಗಿಸಲು ಶೌಚಾಲಯ ಮತ್ತು ಓದುವ ಹಂಬಲಕ್ಕೆ ಬೆಂಬಲ ನೀಡಲು ಗ್ರಂಥಾಲಯ ಎರಡೂ ಹತ್ತಿರದಲ್ಲೇ ನಿರ್ಮಾಣವಾಗಲಿ ಎಂಬುದೇ ನಮ್ಮ ಆಶಯ.

~ ಸುರೇಶ್ ಎನ್.

Leave a Reply

comments

Related Articles

error: