ಮೈಸೂರು

ರಸಗೊಬ್ಬರ ದುಬಾರಿ ದರಕ್ಕೆ ಮಾರಿದರೆ ಕಾನೂನು ಕ್ರಮ: ರಂದೀಪ್

ಮೈಸೂರು, ಅ.೧೨: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಯೂರಿಯಾ ರಸಗೊಬ್ಬರವನ್ನು ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡು ಬಂದರೆ, ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ರಂದೀಪ್ ಡಿ. ಜಿಲ್ಲೆಯ ಎಲ್ಲಾ ಕೃಷಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಅ.೧೦ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಬ್ಬು ಬೆಳೆಗಾರರ ಸಭೆಯಲ್ಲಿ ರಸಗೊಬ್ಬರ ಕಾಳಸಂತೆ ಮಾರಾಟದ ಬಗ್ಗೆ ಚರ್ಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಜಿಲ್ಲೆಯ ತಿ.ನರಸೀಪುರ ಮತ್ತು ಕೆ.ಆರ್.ನಗರ ತಾಲೂಕುಗಳಲ್ಲಿ ಕೆಲವೊಂದು ಡೀಲರ್‌ಗಳು ಯೂರಿಯಾ ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮ ಜರುಗಿಸಿ, ರೈತರಿಗೆ ಸಕಾಲದಲ್ಲಿ ಯೂರಿಯಾ ರಸಗೊಬ್ಬರವನ್ನು ಒದಗಿಸಿಕೊಡಬೇಕೆಂದು ರೈತ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದರು.
ಜಿಲ್ಲೆಯ ಎಲ್ಲಾ ರಸಗೊಬ್ಬರ ಮಾರಾಟಗಾರರು ಮತ್ತು ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಭೇಟಿ ನೀಡಿ ವಿವಿಧ ರಸಗೊಬ್ಬರಗಳ ದಾಸ್ತಾನನ್ನು ಪರಿಶೀಲಿಸಿ ಈ ಕಚೇರಿಗೆ ವರದಿ ಮಾಡಬೇಕು. ಯಾವುದೇ ರೀತಿಯಲ್ಲಿ ಕಾಯ್ದೆಗಳ ಉಲ್ಲಂಘನೆಗಳು ಕಂಡುಬಂದರೆ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ ಯೂರಿಯಾ ರಸಗೊಬ್ಬರದ ಕೊರತೆ ಕಂಡುಬಂದಲ್ಲಿ ಅಂತಹ ಮಾರಾಟಗಾರರು ಅಥವಾ ಸಹಕಾರ ಸಂಘಗಳು ಕರ್ನಾಟಕ ರಾಜ್ಯ ಮಾರಾಟ ಸಹಕಾರ ಸಂಘಗಳ ನಿಗಮದಲ್ಲಿ ಲಭ್ಯವಿರುವ ಯೂರಿಯಾವನ್ನು ಪಡೆದುಕೊಳ್ಳಲು ಶಿಫಾರಸ್ಸು ಮಾಡಬಹುದು.
ಎಲ್ಲರೂ ಕಡ್ಡಾಯವಾಗಿ ತಮ್ಮಲ್ಲಿ ಲಭ್ಯವಿರುವ ರಸಗೊಬ್ಬರಗಳ ದಾಸ್ತಾನು ಹಾಗೂ ಪ್ರತಿ ಚೀಲದ ದರಗಳನ್ನು ಅಂಗಡಿಯ ಮುಂದೆ ಪ್ರದರ್ಶಿಸಲು ಕ್ರಮವಹಿಸುವಂತೆ ಕಟ್ಟುನಿಟ್ಟಾಗಿ ನಿರ್ದೇಶನ ನೀಡಬೇಕು. ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕು ಎಂದು ತಿಳಿಸಿದ್ದಾರೆ. (ವರದಿ ಬಿ.ಎಂ)

 

Leave a Reply

comments

Related Articles

error: