ಪ್ರಮುಖ ಸುದ್ದಿಮೈಸೂರು

ಮುಂದುವರಿದ ವರುಣನ ಆರ್ಭಟ : ತಗ್ಗು ಪ್ರದೇಶದ ಮನೆಗಳಿಗೆ ನೀರು : ಜನತೆಯ ಪರದಾಟ

ಮೈಸೂರು,ಅ.13:- ಮಲ್ಲಿಗೆ ನಗರಿ ಮೈಸೂರಿನಲ್ಲಿ ವರುಣನ ಆರ್ಭಟ ಗುರುವಾರ ಸಂಜೆ  ಕೂಡ ಮುಂದುವರೆದಿದ್ದು ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ಸಂಜೆ ಸುರಿದ ಭಾರಿ ಮಳೆಗೆ ವಸ್ತು ಪ್ರದರ್ಶನ ಮೈದಾನದ ಆವರಣ ಅಕ್ಷರ ಸಹ ಹೊಳೆಯಂತಾಗಿತ್ತು. ಸಾವಿರಾರು ರೂ ಹಣ ನೀಡಿ ಮಳಿಗೆ ಪಡೆದಿರುವ ಮಾಲಿಕರು ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ  ದಸರಾಕ್ಕೂ ಮುನ್ನ ಸುರಿದ ಮಳೆಯಿಂದ ವಸ್ತುಪ್ರದರ್ಶನ ಆವರಣಕ್ಕೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.  ಈ ವೇಳೆ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಭರವಸೆ ನೀಡಿದ್ದ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು ಇದುವರೆಗೂ ಕ್ರಮ ಕೈಗೊಂಡಿಲ್ಲ ಎಂದು ಮಳಿಗೆ ಮಾಲಿಕರು ಆರೋಪಿಸಿದ್ದಾರೆ. ಅಲ್ಲದೇ ಜಿಲ್ಲಾಧಿಕಾರಿ ಡಿ ರಂದೀಪ್ ಸ್ಥಳ ಪರಿಶೀಲನೆ ನಡೆಸಿದ್ದರು ಪರಿಹಾರ ಕ್ರಮ ಮಾತ್ರ  ಇದುವರೆಗೂ ಕೈಗೊಂಡಿಲ್ಲ ಎಂದಿದ್ದಾರೆ. ಪಕ್ಕದಲ್ಲೇ ಹರಿಯುತ್ತಿರುವ ರಾಜಕಾಲುವೆ ನೀರು ವಸ್ತುಪ್ರದರ್ಶನ ಆವರಣಕ್ಕೆ ನುಗ್ಗಿದ ಪರಿಣಾಮ ಅಂಗಡಿ ಮುಂಗಟ್ಟು ನೀರಿನಿಂದ ಮುಳಿಗಿದ್ದವು. ಗೇಮ್ ಮಳಿಗೆ, ಬಜ್ಜಿ ವ್ಯಾಪಾರಿಗಳು ಹಾಗೂ ಸಾಹಸ ಆಟಗಳು ನಡಿಯೋ ಸ್ಥಳಕ್ಕೆ ರಾಜಕಾಲುವೇ ನೀರು ನುಗ್ಗಿ ಆವಾಂತರ ಸೃಷ್ಟಿಸಿತ್ತು.

ಮಹಾ ಮಳೆಗೆ ಮೈಸೂರಿನ ಜನತೆ ಬೆಚ್ಚಿ ಬಿದ್ದಿದ್ದಾರೆ. ಮಳೆನೀರು ನದಿಯಂತೆ ಹರಿದು ರಸ್ತೆಯೋ? ನದಿಯೋ? ಎಂಬ ಅನುಮಾನ ಮೂಡಿಸಿತ್ತು. ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದವು. ಶಾಸಕ ವಾಸು ಚಾಮರಾಜ ಕ್ಷೇತ್ರ ವ್ಯಾಪ್ತಿಯಲ್ಲಿನ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆ ನೀರಿನಲ್ಲಿ  ಕಾರು, ಬೈಕ್ ಆಟೋಗಳು ಅರ್ಧರ್ಧ ಮುಳುಗಿದ್ದವು. ಮಂಡಿಯುದ್ದ ನೀರು ನಿಂತಿತ್ತು. ಸಾರ್ವಜನಿಕರು, ವಾಹನ ಸವಾರರು ಪರದಾಡುವಂತಾಗಿತ್ತು. ಪಡುವಾರಹಳ್ಳಿಯ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಹಲವು ವಸ್ತುಗಳು ನೀರಿನಲ್ಲಿ ಒದ್ದೆಯಾದವು. ರಾತ್ರಿಯೆಲ್ಲ ನೀರನ್ನು ಹೊರಹಾಕುವಂತಾಗಿದ್ದು, ಜಾಗರಣೆ ಮಾಡುವಂತಾಯಿತು.

ತಗ್ಗು ಪ್ರದೇಶಗಳ ನಿವಾಸಿಗಳು ಮಳೆ ಬಂದಾಗ ನೀರು ತುಂಬುತ್ತದೆ ಎಂದು ಜನಪ್ರತಿನಿಧಿಗಳಿಗೆ ಎಷ್ಟು ಬಾರಿ ಹೇಳಿದರೂ ಕ್ರಮಕೈಗೊಳ್ಳದೇ ಇರುವುದಕ್ಕೆ ಹಿಡಿಶಾಪ ಹಾಕಿದರಲ್ಲದೇ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮುಂದಾದರೂ ಜನಪ್ರತಿನಿಧಿಗಳು ತಗ್ಗು ಪ್ರದೇಶಗಳ ಜನತೆಗೆ ಮಳೆಯಿಂದ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: