ಮೈಸೂರು

ಹಾಲ್ಬಿಳುಪಿನ ಅಮೃತ ಶಿಲೆಯಲ್ಲಿ ಪ್ರತಿಷ್ಠಾಪನೆಗೆ ಸಿದ್ಧಗೊಂಡಿದ್ದಾರೆ ರಾಮಕೃಷ್ಣ ಪರಮಹಂಸರು

ಮೈಸೂರು,ಅ.13:- ಇನ್ನು ಮುಂದೆ ಸಾಂಸ್ಕೃತಿಕ ನಗರಿಯಲ್ಲಿ ಅದ್ವೈತ ವೇದಾಂತವನ್ನು ಬೋಧಿಸಿದ ರಾಮಕೃಷ್ಣ ಪರಮಹಂಸರು ಕಾಣ ಸಿಗಲಿದ್ದಾರೆ ..!

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಜನತೆಗೆ ರಾಮಕೃಷ್ಣ ಪರಮಹಂಸರನ್ನು ಪ್ರತಿದಿನವೂ ಕಣ್ತುಂಬಿಸಿಕೊಳ್ಳಲು ಅವಕಾಶ ಮಾಡಿಕೊಡಲಿದೆ. ರಾಮಕೃಷ್ಣ ನಗರದ  ಐ ಬ್ಲಾಕ್ ನಲ್ಲಿ ರಾಮಕೃಷ್ಣ ಪರಮಹಂಸರ ಪ್ರತಿಮೆ ಪ್ರತಿಷ್ಠಾಪನೆಗೆ ಸಿದ್ಧಗೊಂಡಿದೆ. ನಗರದ ಹಾರ್ಡಿಂಜ್ ವೃತ್ತದಲ್ಲಿ ಜಯಚಾಮರಾಜ ಒಡೆಯರ್, ಕುವೆಂಪುನಗರದಲ್ಲಿ ರಾಷ್ಟ್ರಕವಿ ಕುವೆಂಪು, ಪ್ರತಿಮೆಗಳು ಈಗಾಗಲೇ ಅನಾವರಣಗೊಂಡಿದ್ದು, ಇದೀಗ ರಾಮಕೃಷ್ಣನಗರದ  ಐ ಬ್ಲಾಕ್ ನಲ್ಲಿ ರಾಮಕೃಷ್ಣ ಪರಂಹಂಸರ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ನಗರಾಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ರಾಜಸ್ಥಾನದಿಂದ ತರಿಸಿದ ಹಾಲ್ಬಿಳುಪಿನ ಅಮೃತ ಶಿಲೆಯಲ್ಲಿ ಶಿಲ್ಪಿ ಅರುಣ್ ಈ ಶಿಲ್ಪದ ಕೆತ್ತನೆ ಕಾರ್ಯ ನಡೆಸಿದ್ದಾರೆ.

ಅವರು ಈಗಾಗಲೇ ಪುರಭವನದ ಎದುರು ನಿಲ್ಲಿಸಲಾದ ಅಂಬೇಡ್ಕರ್ ಪ್ರತಿಮೆಯನ್ನು ನಿರ್ಮಿಸಿದ್ದಾರೆ.  ರಾಜಸ್ಥಾನದಿಂದ ತರಿಸಲಾದ ಹಾಲ್ಬಿಳುಪಿನ ಅಮೃತ ಶಿಲೆಯಲ್ಲಿ ವಿಗ್ರಹವನ್ನು ರಾಮಕೃಷ್ಣನಗರದಲ್ಲಿ ಎರಡು ತಿಂಗಳಿನಿಂದ ಕೆತ್ತನೆ ಮಾಡುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ವಿಗ್ರಹ ಪೂರ್ಣಗೊಳ್ಳಲಿದೆ. 46ಟನ್ ಗಳ ಮಾರ್ಬಲ್ ಕಲ್ಲು ತರಿಸಿ ಅದಕ್ಕೆ ರೂಪ ಕೊಡುವಾಗ 15ಟನ್ ಗೆ ಇಳಿಸಲಾಗಿದ್ದು, ಪ್ರತಿಮೆ 10ಅಡಿ  ಇರಲಿದೆ ಎನ್ನುತ್ತಾರೆ ಅರುಣ್.  ಒಟ್ಟಿನಲ್ಲಿ ಇನ್ನು ಮುಂದೆ ರಾಮಕೃಷ್ಣ ನಗರದಲ್ಲಿ ರಾಮಕೃಷ್ಣ ಪರಮಹಂಸರ ಪ್ರತಿಮೆ ಕಣ್ಣಿಗೆ ಕಾಣಸಿಗಲಿದೆ. ಅಷ್ಟೇ ಅಲ್ಲದೆ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ವೃತ್ತದ ಸುತ್ತ ಸಾರ್ವಜನಿಕರು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಯನ್ನು ಕೂಡ ಮಾಡಲಾಗುತ್ತಿದ್ದು, ಸಂಜೆಯ ವೇಳೆ  ವಿಗ್ರಹವನ್ನು ವೀಕ್ಷಿಸುತ್ತ ಕುಳಿತುಕೊಂಡು ಮನಸ್ಸನ್ನು ಪ್ರಶಾಂತಗೊಳಿಸಿಕೊಳ್ಳಬಹುದಾಗಿದೆ.  (ಜಿ.ಕೆ,ಎಸ್.ಎಚ್)

Leave a Reply

comments

Related Articles

error: