ಮೈಸೂರು

ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿಯೇ ಇದೆ: ಡಾ.ಮಂಜುನಾಥ್

ಮೈಸೂರು, ಅ.೧೩: ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿಯೇ ಇದೆ. ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಬೇಕೆಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಪದ್ಮಶ್ರೀ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.
ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಮೆಡ್ಟ್ರಾನಿಕ್ಸ್ ಅಮೆರಿಕಾ ಹಾಗೂ ಡಾ.ಗೋವಿಂದರಾಜು ಸುಬ್ರಹ್ಮಣಿ ಹಾರ್ಟ್ ಫೌಂಡೇಷನ್ ವಿಸ್ಕಿನ್‌ಸನ್ ಅಮೆರಿಕಾದವರ ಸಹಯೋಗದೊಂದಿಗೆ ನಡೆದ ಉಚಿತ ಆಂಜಿಯೋಪ್ಲಾಸ್ಟಿ ಕಾರ್ಯಾಗಾರದಲ್ಲಿ ಭಾಗವಹಿಸಿ ಹೃದಯ ಚಿಕಿತ್ಸೆಗೊಳಗಾದ ರೋಗಿಗಳೊಂದಿಗೆ ಮಾತನಾಡಿದ ಅವರು, ಈ ಕಾರ್ಯಾಗಾರದಿಂದ ಬೆಂಗಳೂರಿನಲ್ಲಿ ೧೪೦ ಜನರಿಗೆ, ಮೈಸೂರಿನಲ್ಲಿ ೬೦ ಜನರಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ. ಇದಕ್ಕೆ ಸುಮಾರು ೩ ಕೋಟಿ ರೂ. ಖರ್ಚಾಗಿದೆ. ಇದರಲ್ಲಿ ೨.೨೫ ಕೋಟಿ ರೂ. ಹಣವನ್ನು ಅಮೆರಿಕಾದ ಸುಬ್ರಹ್ಮಣಿ ಹಾರ್ಟ್ ಫೌಂಡೇಷನ್ ನೀಡಿದೆ ಎಂದು ಹೇಳಿದರು.
ರೋಗಿಗಳು ಔಷಧಿಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ನಿಲ್ಲಿಸಿದರೆ ಮತ್ತೆ ಹಾರ್ಟ್ ಅಟ್ಯಾಕ್ ಆಗುತ್ತದೆ. ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಬೀಡಿ, ಸಿಗರೇಟು ಸೇದಬಾರದು. ಜಿಡ್ಡಿನ ಪದಾರ್ಥಗಳನ್ನು ತಿನ್ನಬಾರದು. ಪ್ರತಿದಿನ ನಡೆಯಬೇಕು. ಕೋಪ ಮಾಡಿಕೊಳ್ಳಬಾರದು. ತರಕಾರಿ ಹೆಚ್ಚಾಗಿ ತಿನ್ನಬೇಕು. ಸಮಯಕ್ಕೆ ಸರಿಯಾಗಿ ಊಟ ಔಷಧಿ ತೆಗೆದುಕೊಳ್ಳಬೇಕು ಎಂದ ಅವರು ಮೈಸೂರು ಜಯದೇವದಲ್ಲಿ ಇದುವರೆಗೆ ಒಳರೋಗಿಗಳಾಗಿ ೩೬೫೬೫ ಜನರಿಗೆ ಚಿಕಿತ್ಸೆ ನೀಡಲಾಗಿದೆ. ೪,೧೪,೩೦೪ ಜನ ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ೧೫,೫೩೮ ಜನರಿಗೆ ಆಂಜಿಯೋಗ್ರಾಂ ಮಾಡಲಾಗಿದೆ. ೬,೯೩೨ ಜನರಿಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಗಿದೆ. ೨೬೨೫೪೮ ಜನರಿಗೆ ಇಸಿಜಿ ಮಾಡಲಾಗಿದೆ. ೧೫೯೫೧೧ ಜನರಿಗೆ ಎಕೋ ಮಾಡಲಾಗಿದೆ ಎಂದ ಅವರು ಈ ಕಾರ್ಯಾಗಾರ ಅತ್ಯಂತ ಯಶಸ್ವಿಯಾಗಿದ್ದು, ಆಸ್ಪತ್ರೆಯ ಎಲ್ಲಾ ವೈದ್ಯರು ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಾ.ಜಿ.ಸುಬ್ರಹ್ಮಣಿ, ಡಾ.ದೇವರಾಜು, ಡಾ.ವಿಶ್ವನಾಥ್, ಡಾ.ಪಾಂಡುರಂಗ, ಡಾ.ಸದಾನಂದ, ಡಾ.ಹರ್ಷ ಬಸಪ್ಪ, ಡಾ.ಸಂತೋಷ್, ಡಾ.ರಾಜೀವ್, ಡಾ.ಹೇಮಾರಮೇಶ್, ಡಾ.ವೀಣಾ ನಂಜಪ್ಪ, ಡಾ.ಪುರುಷೋತ್ತಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

 

Leave a Reply

comments

Related Articles

error: