ದೇಶಪ್ರಮುಖ ಸುದ್ದಿ

ಪಟಾಕಿ ಮಾರಾಟ ನಿಷೇಧಕ್ಕೂ ಕೋಮುವಾದದ ಬಣ್ಣ ಬಳಿಯಬೇಡಿ : ಸುಪ್ರೀಮ್‍ಕೋರ್ಟ್ ತಾಕೀತು

ನವದೆಹಲಿ, ಪ್ರಮುಖ ಸುದ್ದಿ (ಅ.13): ಪಟಾಕಿ ನಿಷೇಧಕ್ಕೂ ಕೋಮುವಾದದ ಬಣ್ಣ ಬಳಿಯಲು ಪ್ರಯತ್ನಿಸಬೇಡಿ ಎಂದು ಇಂದು ಸುಪ್ರೀಮ್‍ ಕೋರ್ಟ್‍ ತಾಕೀತು ಮಾಡಿದೆ. ಜೊತೆಗೆ ದೇಶದ ರಾಜಧಾನಿ ದೆಹಲಿಯಲ್ಲಿ ಪಟಾಕಿ ಮಾರಾಟ ನಿಷೇಧ ಆದೇಶವನ್ನು ಹಿಂತೆಗೆದುಕೊಳ್ಳಲು ಕೋರ್ಟ್ ನಿರಾಕರಿಸಿದೆ.

ತಾತ್ಕಾಲಿಕ ಅನುಮತಿ ಹೊಂದಿರುವ ವ್ಯಾಪಾರಿಗಳು ನಿನ್ನೆ ಸುಪ್ರೀಮ್‍ಕೋರ್ಟ್ ಮೊರೆ ಹೋಗಿ ದೆಹಲಿಯಲ್ಲಿ ಪಟಾಕಿಗಳ ಮಾರಾಟಕ್ಕೆ ನಿಷೇಧ ಹೇರಿರುವುದನ್ನು ಹಿಂತೆಗೆದುಕೊಳ್ಳುವಂತೆ ಕೋರಿದ್ದರು.

ನ್ಯಾಯಾಲಯದ ಆದೇಶಕ್ಕೆ ಕೋಮುವಾದದ ಬಣ್ಣ ಬಳಿದು ರಾಜಕೀಯ ರಾಡಿ ಮಾಡಬೇಡಿ ಎಂದೂ ಕೋರ್ಟ್ ತಾಕೀತು ಮಾಡಿದ್ದು, ಕೋಮುವಾದ ಲೇಪಿತ ಪ್ರತಿಕ್ರಿಯೆಗಳಿಂದ ನಮಗೆ ತೀವ್ರ ಬೇಸರವಾಗಿದೆ. ನಮ್ಮ ನಿಷೇಧ ಆದೇಶಕ್ಕೆ ಯಾವುದೇ ಧಾರ್ಮಿಕ ಅಂಶಗಳು ಪ್ರಭಾವ ಬೀರಿಲ್ಲ ಎಂದು ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಹೇಳಿದ್ದಾರೆ. ನ್ಯಾ.ಎ.ಕೆ.ಸಿಕ್ರಿ ಅವರು ಇದೇ 9ರಂದು ಮತ್ತಿಬ್ಬರು ನ್ಯಾಯಾಧೀಶರನ್ನು ಒಳಗೊಂಡಿದ್ದ ಪೀಠದಲ್ಲಿ ದೆಹಲಿಯಲ್ಲಿ ಈ ವರ್ಷ ಪಟಾಕಿ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದರು.

ದೆಹಲಿ ರಾಜಧಾನಿ ಪ್ರದೇಶದಲ್ಲಿ ಈ ದೀಪಾವಳಿ ಸಮಯದಲ್ಲಿ ಪಟಾಕಿಗಳ ಮಾರಾಟವನ್ನು ನಿಷೇಧಿಸಿದ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಂತೆ ಇದೇ ಸಂದರ್ಭದಲ್ಲಿ ಅವರು ಪೊಲೀಸರಿಗೆ ಸೂಚಿಸಿದರು. ದೀಪಾವಳಿಯೆಂಬುದು ಕೇವಲ ಹಿಂದೂ ಧರ್ಮದವರು ಮಾತ್ರವಲ್ಲದೆ ಜೈನರು, ಸಿಖರು ಕೂಡ ಆಚರಿಸುತ್ತಾರೆ ಎಂದು ಹೇಳಿದರು. ಜನರು ದೀಪಾವಳಿ ಆಚರಿಸುವುದನ್ನು ನ್ಯಾಯಾಲಯ ನಿಲ್ಲಿಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಸಿಕ್ರಿ ಮತ್ತು ಅಶೋಕ್ ಭೂಷಣ್ ತಿಳಿಸಿದರು.

ದೆಹಲಿಯಲ್ಲಿ ಪಟಾಕಿಗಳ ಮಾರಾಟ ಮತ್ತು ಸಂಗ್ರಹಣೆ ನಿಷೇಧ ನವೆಂಬರ್ ಒಂದರವರೆಗೆ ಜಾರಿಯಲ್ಲಿರುತ್ತದೆ.

(ಎನ್‍ಬಿಎನ್‍)

Leave a Reply

comments

Related Articles

error: