ಪ್ರಮುಖ ಸುದ್ದಿವಿದೇಶ

ಯುನೆಸ್ಕೋ ಸದಸ್ಯತ್ವ ತೊರೆಯಲು ಮುಂದಾದ ಅಮೆರಿಕಾ

ವಾಷಿಂಗ್ಟನ್,ಅ.13-ವಿಶ್ವಸಂಸ್ಥೆಯ ಪಾರಂಪರಿಕ ಸಂಘಟನೆ ಯುನೆಸ್ಕೋದ ಮುಂದುವರಿದ ಇಸ್ರೇಲ್ ವಿರೋಧಿ ತಾರತಮ್ಯವನ್ನು ವಿರೋಧಿಸಿ ಅಮೆರಿಕಾ ತಾನು ಯುನೆಸ್ಕೋದ ಸದಸ್ಯತ್ವವನ್ನು ತೊರೆಯುತ್ತಿರುವುದಾಗಿ ಹೇಳಿದೆ. ಯುನೆಸ್ಕೋದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರೂ ಸದಸ್ಯೇತರನಾಗಿ ವಿವಿಧ ವಿಚಾರಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನು ನೀಡುವುದನ್ನು ಮುಂದುವರಿಸುವುದಾಗಿ ಅಮೆರಿಕಾ ತನ್ನ ನಿರ್ಧಾರ ಘೋಷಿಸುವಾಗ ತಿಳಿಸಿದೆ. ಡಿಸೆಂಬರ್ 31 ಕ್ಕೆ ಅಮೆರಿಕಾದ ಯುನೆಸ್ಕೋ ಸದಸ್ಯತ್ವ ಅಂತ್ಯವಾಗಲಿದೆ.

ಆಕ್ರಮಿತ ಫೆಲೆಸ್ತೀನಿನ ದಕ್ಷಿಣದಲ್ಲಿರುವ ಹೆಬ್ರಾನ್ ನಗರವನ್ನು ಫೆಲೆಸ್ತೀನಿ ವಿಶ್ವ ಪಾರಂಪರಿಕ ತಾಣ ಎಂದು ಯುನೆಸ್ಕೋ ಘೋಷಿಸಿರುವುದು ಅಮೆರಿಕಾ ಹಾಗೂ ಇಸ್ರೇಲ್ ದೇಶಗಳಿಗೆ ಸರಿ ಕಂಡು ಬಂದಿಲ್ಲ. ಹೀಗಾಗಿ ಅಮೆರಿಕಾ ಈ ನಿರ್ಧಾರ ತೆಗೆದುಕೊಂಡಿದೆ. ಯುನೆಸ್ಕೋ ಮಹಾನಿರ್ದೇಶಕಿ ಐರಿನಾ ಬೊಕೊವ ಅಮೆರಿಕಾದ ನಿರ್ಧಾರದ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರದಿಂದಾಗಿ ವಿಶ್ವಸಂಸ್ಥೆ ಕುಟುಂಬಕ್ಕೆ ಹಾಗೂ ಅಮೆರಿಕಾಗೂ ನಷ್ಟವುಂಟಾಗಿದೆ ಎಂದು ಅವರು ಹೇಳಿದ್ದಾರೆ.

ಅಮೆರಿಕಾದ ನಿರ್ಧಾರವನ್ನು ಸ್ವಾಗತಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇದೊಂದು ದಿಟ್ಟ ಹಾಗೂ ನೈತಿಕತೆಯಿಂದ ಕೂಡಿದ ನಿರ್ಧಾರ. ಯುನೆಸ್ಕೋ ಒಂದು ಅಸಂಬದ್ಧ ಸಂಸ್ಥೆಯಾಗಿ ಬಿಟ್ಟಿದೆ. ಇತಿಹಾಸವನ್ನು ಸಂರಕ್ಷಿಸುವ ಬದಲು ಅದು ಇತಿಹಾಸವನ್ನು ತಿರುಚುತ್ತಿದೆ ಎಂದು ಆರೋಪಿಸಿದ್ದಾರೆ. ಇನ್ನು ಅಮೆರಿಕಾ ತನ್ನ ನಿರ್ಧಾರ ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ವಿಶ್ವಸಂಸ್ಥೆಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಏಜನ್ಸಿಯ ಸದಸ್ಯತ್ವವನ್ನು ತೊರೆಯುವ ಬಗ್ಗೆ ಯೋಚಿಸುತ್ತಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ. (ವರದಿ-ಎಂ.ಎನ್)

 

 

Leave a Reply

comments

Related Articles

error: