ಮೈಸೂರು

ಅ.೨೩ರಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ: ಟಿ.ಯೋಗೇಶ್

ಮೈಸೂರು, ಅ.೧೩: ಜಿಲ್ಲಾಡಳಿತದ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಅ.೨೩ರಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅ.೨೩ರಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಕಲಾಮಂದಿರದಲ್ಲಿ ಆಚರಿಸಲಾಗುವುದು. ಬ್ರಿಟಿಷರ ವಿರುದ್ಧ ಹೋರಾಡಿದ ಶೌರ್ಯ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಇವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ವಿವಿಧ ಸಂಘ ಸಂಸ್ಥೆಯವರು ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ನೀಡುವಂತೆ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಪ್ಪ ಮಾತನಾಡಿ, ಮೊದಲ ಬಾರಿಗೆ ಸರ್ಕಾರದ ಸೂಚನೆ ಮೇರೆಗೆ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಹೆಚ್ಚಿನ ಜನರನ್ನು ಸೇರಿಸಲು ರಾಣಿ ಚೆನ್ನಮ್ಮ ಸಂಘ ಸಂಸ್ಥೆಯವರು ಸಂಘಟನೆ ಮಾಡಬೇಕು ಎಂದರು.
ಮಖ್ಯ ಭಾಷಣಕ್ಕಾಗಿ ಐದು ಜನರ ಹೆಸರನ್ನು ಸಭೆಯಲ್ಲಿ ಸೂಚಿಸಿದ್ದು ಅದರಲ್ಲಿ ಒಬ್ಬರನ್ನು ಅಂತಿಮ ಗೊಳಿಸಲಾಗುವುದು. ವೀರ ವನಿತೆ ರಾಣಿ ಚೆನ್ನಮ್ಮ ಸ್ವಯಂ ಸೇವಾ ಸಂಘದವರು ಎಸ್‌ಎಸ್‌ಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಕೆಲವು ಮಕ್ಕಳಿಗೆ ಸಹಾಯ ಧನ ನೀಡುವುದಾಗಿ ತಿಳಿಸಿದರು.
ಸಭೆಯಲ್ಲಿ ರಂಗಭೂಮಿ ಕಲಾವಿದ ಬಿ.ಎಂ. ರಾಮಚಂದ್ರ, ಕರುನಾಡು ನವೋದಯ ಸೇನೆ ಅಧ್ಯಕ್ಷ ರವಿಶಂಕರ್, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಕುಮಾರ್ ಸೇರಿದಂತೆ ಇನ್ನಿತರ ಸಂಘಸಂಸ್ಥೆಯವರು ಉಪಸ್ಥಿತರಿದ್ದರು. (ವರದಿ ಬಿ.ಎಂ)

 

Leave a Reply

comments

Related Articles

error: