ಪ್ರಮುಖ ಸುದ್ದಿ

ಪ್ರಧಾನಿಯನ್ನು ನಿಂದಿಸಿದ ರೋಷನ್ ಬೇಗ್ ವಿರುದ್ಧ ಪ್ರತಿಭಟನೆ

ಪ್ರಮುಖ ಸುದ್ದಿ, ತಿ.ನರಸೀಪುರ, ಅ.೧೪: ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಸಚಿವ ರೋಷನ್ ಬೇಗ್ ಅಸಭ್ಯ ವರ್ತನೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ವಿವಿಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನ ಕಾಂಗ್ರೆಸ್ ಕಾರ್ಯಕರ್ತರ ಸಭೆಯೊಂದರಲ್ಲಿ ಸಚಿವ ರೋಷನ್ ಬೇಗ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವಾಗ ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿ ನಿಂದಿಸಿರುವುದು ಖಂಡನೀಯ ಎಂದು ಕಾಂಗ್ರೆಸ್ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗುತ್ತಾ ರೋಷನ್‌ಬೇಗ್ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಸಲ್ಲಿಸಿ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ ಕಿಡಿ ಕಾರಿದರು.
ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ತೋಟದಪ್ಪ ಬಸವರಾಜು ಮಾತನಾಡಿ, ಸಚಿವ ಸಂಪುಟದಲ್ಲಿ ಜವಾಬ್ದಾರಿಯುತ ಸಚಿವನಾಗಿರುವ ರೋಷನ್ ಬೇಗ್ ಪ್ರಧಾನ ಮಂತ್ರಿಗಳ ಘನತೆಯನ್ನು ಅರಿಯದೆ ಹುಚ್ಚುನಾಯಿಯಂತೆ ಸಭೆಯೊಂದರಲ್ಲಿ ಮಾತನಾಡಿದ್ದಾರೆ. ಇಂತಹ ಅನಾಗರಿಕ ಸಚಿವನ ಹೇಳಿಕೆ ಕಾಂಗ್ರೆಸ್ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ತಾವೊಬ್ಬ ಧಾರ್ಮಿಕ ಗುರು ಎಂಬುದನ್ನೂ ಮರೆತು ಮೋದಿಯವರು ಹಿಟ್ಲರ್, ರಾಜ್ಯದ ಮುಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಎಂಬುದಾಗಿ ಜೆಡಿಎಸ್ ಪ್ರಸಾದ ಸ್ವೀಕರಿಸಿ ಬಹಿರಂಗ ಹೇಳಿಕೆ ನೀಡುತ್ತಾರೆ. ಇವರಿಬ್ಬರನ್ನು ದೇಶದಿಂದಲೇ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಹಿಂ.ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಎಂ.ವೆಂಕಟರಮಣಶೆಟ್ಟಿ ಮಾತನಾಡಿ, ವಿಶ್ವ ಮಾನ್ಯತೆ ಪಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ಸಚಿವ ರೋಷನ್ ಬೇಗ್ ಅವರನ್ನು ಪ್ರಜಾತಂತ್ರ ವ್ಯವಸ್ಥೆಯನ್ನು ಗೌರವಿಸುವ ಮುಖ್ಯಮಂತ್ರಿಗಳು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ದೇಶದ ಶಾಸಕಾಂಗದ ನಾಯಕರಾಗಿರುವ ಪ್ರಧಾನಿ ಅವರನ್ನೇ ಅವಾಚ್ಯ ಶಬ್ಧದಿಂದ ಟೀಕಿಸಿರುವ ಸಚಿವ ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಬಿಜೆಪಿ ಹೋರಾಟವನ್ನು ತೀವ್ರಗೊಳಿಸಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷ ಹೆಚ್.ಎಂ.ಪರಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಬಸವರಾಜು, ಹೊಟೇಲ್ ಉದ್ಯಮಿ ಕೆ.ವಿ.ವಿನಯ್‌ಕುಮಾರ್, ಹಿಂ.ವರ್ಗಗಳ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಕೆ.ನಂಜುಂಡಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: