ಮೈಸೂರು

ಕೇಂದ್ರಸ್ಥಾನದಲ್ಲೇ ಇದ್ದು ಪರಿಹಾರ ಕ್ರಮ ಕೈಗೊಳ್ಳಿ: ಸಚಿವ ಮಹದೇವಪ್ಪ ಸೂಚನೆ

ಮೈಸೂರು, ಅ.೧೪: ನಗರದಲ್ಲಿ ಹಲವಾರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉಂಟಾಗಿರುವ ಸಮಸ್ಯೆಗಳಿಗೆ ಸಮರೋಪಾದಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ.
ಜಿಲ್ಲಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಇದರಿಂದ ನಾಗರಿಕರಿಗೆ ಸಾರಿಗೆ ಸಂಪರ್ಕ, ವಿದ್ಯುತ್, ಮುಂತಾದ ಸೇವೆಗಳ ಲಭ್ಯತೆಯಲ್ಲಿ ಸಮಸ್ಯೆಯಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ, ಅವಾಂತರ ಸೃಷ್ಟಿ ಮಾಡಿದೆ. ಇದಕ್ಕೆ ಪರಿಹಾರ ಕ್ರಮಗಳು ತ್ವರಿತವಾಗಿ ಆಗಬೇಕು ಎಂದು ಜಿಲ್ಲಾಧಿಕಾರಿ ರಂದೀಪ್.ಡಿ, ಮಹಾನಗರ ಪಾಲಿಕೆ ಪ್ರಭಾರ ಆಯುಕ್ತ ಸುರೇಶ್ ಬಾಬು, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕಾಂತರಾಜು ಹಾಗೂ ಪಾಲಿಕೆ ಮುತ್ತು ಮುಡಾ ಇಂಜಿನಿಯರ್‌ಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಎಡೆಬಿಡದೆ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಸದಾ ಜಾಗೃತರಾಗಿರಬೇಕು. ಅನುಮತಿ ಇಲ್ಲದೆ, ಯಾವುದೇ ಕಾರಣಕ್ಕೂ ಕೇಂದ್ರ ಸ್ಥಾನ ಬಿಡಬಾರದು. ಮಳೆಯಿಂದಾಗಿ ಅಗತ್ಯ ಮೂಲ ಸೌಲಭ್ಯಗಳು ಹಾಗೂ ಸೇವೆಗಳ ಸಮಸ್ಯೆಯಾದರೆ ಶೀಘ್ರವಾಗಿ ಬಗೆಹರಿಸಿ, ನಾಗರಿಕರ ಹಿತ ರಕ್ಷಣೆ ಮಾಡಬೇಕು. ತಗ್ಗು ಪ್ರದೇಶದಲ್ಲಿ ವಾಸಿಸುವ ನಿವಾಸಿಗಳು, ವಿಶೇಷವಾಗಿ ಅಲೆಮಾರಿ ಜನಾಂಗದವರು ವಾಸಿಸುವ ಕಡೆ ನಿಗಾ ವಹಿಸಿ, ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ. (ವರದಿ ಬಿ.ಎಂ)

 

Leave a Reply

comments

Related Articles

error: