ಮೈಸೂರು

ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ: ಶ್ರೀನಿವಾಸ ಪ್ರಸಾದ್‍ಗೆ ಮಂಜುನಾಥ್ ಟಾಂಗ್

ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಪಕ್ಷದ ಏಳಿಗೆಗೆ ಶ್ರಮಿಸುತ್ತಿದ್ದೇನೆ. ನಂಜನಗೂಡು ಕ್ಷೇತ್ರದ ಉಪ ಚುನಾವಣೆಗೆ ಹಿರಿತನದ ಆಧಾರದ ಮೇಲೆ ಟಿಕೆಟ್ ನೀಡಿದರೆ ನಾನೂ ಕೂಡ ಆಕಾಂಕ್ಷಿ ಎಂದು ಮಾಜಿ ಎಂಎಲ್‌ಸಿ ಹಾಗೂ ರಾಜ್ಯ ಎಸ್‌ಸಿ, ಎಸ್‌ಟಿ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಂಜುನಾಥ್ ತಿಳಿಸಿದರು.

ಭಾನುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2012ರ ವಿಧಾನಸಭೆ ಚುನಾವಣೆಯಲ್ಲಿ ಶ್ರೀನಿವಾಸ್ ಪ್ರಸಾದ್ ಅವರೊಂದಿಗೆ ನಾನೂ ಕೂಡ ನಂಜನಗೂಡು ಕ್ಷೇತ್ರದ ಅಭ್ಯರ್ಥಿಯಾಗಿದ್ದೆ. ಆದರೆ, ಅವರು ನನಗಿಂತ ಹಿರಿಯರಾದ್ದರಿಂದ ಅವರಿಗೆ ಟಿಕೆಟ್ ನೀಡಲಾಯಿತು. ತಿ.ನರಸೀಪುರ ಕ್ಷೇತ್ರದಲ್ಲಿ ಎಚ್.ಸಿ.ಮಹದೇವಪ್ಪನವರು ಅಭ್ಯರ್ಥಿಯಾಗಿದ್ದರಿಂದ ಅಲ್ಲೂ ಟಿಕೆಟ್ ದೊರೆಯಲಿಲ್ಲ. ಇದೀಗ ನಂಜನಗೂಡು ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಗೆ ಹಿರಿತನದ ಆಧಾರದ ಮೇಲೆ ಟಿಕೆಟ್ ನೀಡಿದರೆ ನನಗೆ ಟಿಕೆಟ್ ನೀಡಬೇಕು ಎಂದು ಪರೋಕ್ಷವಾಗಿ ಸುನಿಲ್ ಬೋಸ್‌ಗೆ ಟಿಕೆಟ್ ನೀಡಬಾರದು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ದೇಶದ ಹಳೆಯ ಪಕ್ಷ. ಇಲ್ಲಿ ನೂರಾರು ನಾಯಕರು ಅಸ್ತಿತ್ವ ಕಂಡುಕೊಂಡಿದ್ದಾರೆ. ಪಕ್ಷದಿಂದ ನಾಯಕರೇ ಹೊರತು ನಾಯಕರಿಂದ ಪಕ್ಷವಲ್ಲ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂದು ಶ್ರೀನಿವಾಸ್‌ ಪ್ರಸಾದ್‌ಗೆ ಟಾಂಗ್ ನೀಡಿದರು.

ಭ್ರಷ್ಟಾಚಾರ ತಡೆಗಟ್ಟುವಲ್ಲಿ ಲೋಕಾಯುಕ್ತ ಸಂಸ್ಥೆ ದೇಶದಲ್ಲೇ ಹೆಸರುವಾಸಿಯಾಗಿದ್ದು ಅಂತಹ ಸಂಸ್ಥೆಯನ್ನು ಮೂಲೆಗುಂಪು ಮಾಡಬಾರದು. ಲೋಕಾಯುಕ್ತರನ್ನು ನೇಮಿಸಿ ಇನ್ನಷ್ಟು ಅಧಿಕಾರ ನೀಡುವ ಮೂಲಕ ಭ್ರಷ್ಟರ ಹೆಡೆಮುರಿ ಕಟ್ಟಬೇಕು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಟಿ.ಎಸ್.ರವಿಶಂಕರ್, ಎಸ್‌ಸಿ, ಎಸ್‌ಟಿ ಜಿಲ್ಲಾಧ್ಯಕ್ಷ ಸೋಮಸುಂದರ್, ಉಪಾಧ್ಯಕ್ಷ ನಂಜುಂಡಸ್ವಾಮಿ, ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: