ಮೈಸೂರು

ಪೂರ್ವಗ್ರಹಿಕೆ ಮತ್ತು ತಪ್ಪು ಗ್ರಹಿಕೆ ಇಟ್ಟುಕೊಂಡು ಸಾಹಿತ್ಯವನ್ನು ಓದಬಾರದು : ಹೆಚ್.ಎನ್. ಮಂಜುರಾಜ್

ಮೈಸೂರು,ಅ.14:- ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು, ಮೈಸೂರು, ಕನ್ನಡ ವಿಭಾಗ ಸಾಹಿತ್ಯ ವೇದಿಕೆ ಕಥಾ ಕಥನ ಪಠ್ಯಾಧಾರಿತ ಕನ್ನಡ ಸಣ್ಣ ಕಥೆಗಳ ಅಂತರ ಕಾಲೇಜು ಮಟ್ಟದ ವಿಮರ್ಶಾ ಲೇಖನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಸಮಾರಂಭವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.

ಕೃಷ್ಣರಾಜ ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಹೆಚ್.ಎನ್. ಮಂಜುರಾಜ್ ಮಾತನಾಡಿ ಸಾಹಿತ್ಯ ಮತ್ತು ಸಾಹಿತಿಗಳನ್ನು ವಿಮರ್ಶಕರು ನಿಯಂತ್ರಿಸುತ್ತಾರೆ. ಇದು ಸಾಹಿತ್ಯ ವಲಯದಲ್ಲಿ ಆಗಬಾರದು. ಪೂರ್ವಗ್ರಹಿಕೆ ಮತ್ತು ತಪ್ಪು ಗ್ರಹಿಕೆ ಇಟ್ಟುಕೊಂಡು ಸಾಹಿತ್ಯವನ್ನು ಓದಬಾರದು. ಕಾಲ ಮತ್ತು ಪ್ರವಾಹ ಯಾರನ್ನೂ ತಡೆಯದು. ಕನ್ನಡ ಸಾಹಿತ್ಯದಲ್ಲಿ ಮಾಸ್ತಿಯವರ ಕಥೆಗಳನ್ನು ವಿಮರ್ಶಕರು ಮೊದಲು ತೆಗಳಿದರು. ಅನಂತರ ವಿಮರ್ಶಕರು ಮಾಸ್ತಿಯವರನ್ನು ಹೊಗಳಿದರು. ಮೊದಲು ಸೃಜನಶೀಲತೆ ಅನಂತರ ವಿಮರ್ಶೆ ಎಂದರು. ಕಥೆಗಾರರು ಕಾಲದಿಂದ ಕಾಲಕ್ಕೆ ಕಥಾ ಹಂದರವನ್ನು ಬದಲಾಸಿದರು. ಕನ್ನಡ ಕಥೆಗಳನ್ನು ಒಂದು ಕಾಲದಲ್ಲಿ ಭಾವಗೀತೆಗಳಿಗೆ ಹೋಲಿಸಲಾಗುತ್ತಿತ್ತು. ಭಾವಗೀತೆ ಕವಿಯಲ್ಲಿ ಒತ್ತಿಕೊಂಡು ಬಂದ ಅನುಭವದ ತುಡಿತಗಳಾಗಿವೆ. ಹಾಗೆಯೇ ಕಥೆಗಳ ಕೂಡ, ಆದರೆ ನಿಧಾನವಾಗಿ ಕನ್ನಡ ಕಥಾ ಜಗತ್ತು ವಿಸ್ತರಿಸುತ್ತಾ ಮಹಾಕಾವ್ಯದ ಸ್ಥಾನಮಾನವನ್ನು ಪಡೆಯಿತು ಎಂದು ತಿಳಿಸಿದರು.

ಸಾಹಿತಿ ಉಷಾ ನರಸಿಂಹನ್, ಕನ್ನಡ ಸಣ್ಣ ಕಥೆಗಳ ವಿಮರ್ಶಾ ಲೇಖನ ಸ್ಪರ್ಧೆಯಲ್ಲಿ  ವಿಜೇತರಿಗೆ ಬಹುಮಾನ ವಿತರಿಸಿದರು. ಪ್ರಥಮ ಸ್ಥಾನವನ್ನು  ಕೆ.ಆರ್.ನಗರದ  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಜಯಕುಮಾರ್ ಟಿ,ದ್ವಿತೀಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯ ಭಾರತಿನಗರ ಭಾರತೀ ಕಾಲೇಜಿನ ಅನ್ನಪೂರ್ಣ ಕೆ.ಸಿ. ತೃತೀಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೋನಿಷಾ, ನಾಲ್ಕನೇ ಸ್ಥಾನವನ್ನು  ಕೆ.ಆರ್.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂಕಿತ ಸುರೇಶ್ ಪಡೆದಿದ್ದಾರೆ.  ಮುಖ್ಯ ಅತಿಥಿಗಳಾಗಿ ಕಥೆಗಾರ ಮಂಜುನಾಥ ಲತಾ,ಕಾಲೇಜಿನ ಪ್ರಾಂಶುಪಾಲೆ ಡಾ. ಎಂ. ಶಾರದ ಕನ್ನಡ ವಿಭಾಗದ ಮುಖ್ಯಸ್ಥ ಜಿ. ಪ್ರಸಾದಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: