ಮೈಸೂರು

ಮನಸ್ಸು ಶುದ್ಧವಾಗಿದ್ದರೆ ಮಾತ್ರ ದೇವರಿಗೆ ಪೂಜೆ ಸಲ್ಲುತ್ತದೆ : ಸಿಎಂ

ಮನಸ್ಸು ಶುದ್ಧವಾಗಿದ್ದರೆ ಮಾತ್ರ ನಮ್ಮಪೂಜೆ ದೇವರಿಗೆ ಸಲ್ಲುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮೈಸೂರು ಜಿಲ್ಲೆಯ ನಂಜನಗೂಡು ರಸ್ತೆಯಲ್ಲಿನ ಕಡಕೋಳದಲ್ಲಿರುವ ಶ್ರೀ ಬೀರೇಶ್ವರ ದೇವಸ್ಥಾನದ ಕಳಶಾರೋಹಣ ಮತ್ತು ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.

ದೇವರನ್ನು ಪೂಜಿಸುವಾಗ ಮನಸ್ಸು ಶುದ್ಧವಾಗಿರಬೇಕು. ಹಾಗಿದ್ದಾಗ ಮಾತ್ರ ನಾವು ನೀಡಿದ ಪೂಜೆ ಅವನಿಗೆ ಸಲ್ಲುತ್ತದೆ. ಮನಸ್ಸಿನಲ್ಲಿ ಏನೇನೋ ಅಶುದ್ಧಿಗಳು ತುಂಬಿಕೊಂಡಿದ್ದರೆ ನಾವು ಮಾಡುವ ಪೂಜೆ ವ್ಯರ್ಥವಾಗಲಿದೆ. ದೇವರಲ್ಲಿ ಕೇವಲ ನಮಗೆ ಒಳ್ಳೆಯದಾಗಲಿ ಅಂತ ಕೇಳಿಕೊಳ್ಳುವುದಲ್ಲ. ಬದಲಿಗೆ ನಮ್ಮ ಸುತ್ತಮುತ್ತಲು ಇರುವವರಿಗೂ ಹಾಗೂ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಕೇಳಿಕೊಳ್ಳಬೇಕು ಎಂದು ತಿಳಿಸಿದರು. ಇಲ್ಲಿನ ಪರಿಸರವನ್ನು ನಾನು 35 ವರ್ಷಗಳಿಂದ ಬಲ್ಲೆ. ನಿಮ್ಮೆಲ್ಲರ ಕೃಪೆಯಿಂದ ನನಗೆ ಜನಸೇವೆಗೆ ಅವಕಾಶ ದೊರಕಿತು ಎಂದು ತಿಳಿಸಿದರು.

ಇದೇ ಸಂದರ್ಭ ಕಡಕೋಳ ಗ್ರಾಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೆಸ್ಕ್ ಶಾಖಾ ಕಚೇರಿ ಹಾಗೂ ಲೆಕ್ಕಾಧಿಕಾರಿಗಳ ಕಚೇರಿಯ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಮೈಸೂರಿನಲ್ಲಿ ಐಟಿ-ಬಿಟಿ ಸ್ಥಾಪನೆಗೆ ಸ್ಥಳ ಗುರುತಿಸಲಾಗುತ್ತಿದೆ. ಇನ್ನೂ ಸರಿಯಾದ ಸ್ಥಳ ದೊರಕಿಲ್ಲ. ದೊರಕಿದ ನಂತರ ಇಲ್ಲಿ ಐಟಿ-ಬಿಟಿ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಈ ಬಾರಿ ಮಳೆ ಇಲ್ಲದೆ ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. 120 ತಾಲೂಕುಗಳನ್ನು ಬರ ಪೀಡಿತ ಎಂದು ಗುರುತಿಸಲಾಗಿದೆ. ಈ ಪ್ರಾಂತದಲ್ಲಿ ಜೂನ್ ತಿಂಗಳವರೆಗೆ 23ಟಿಎಂಸಿ ನೀರು ಬೇಕಾಗುತ್ತದೆ. ಈಗ ಅರ್ಧದಷ್ಟು ನೀರಿದೆ. ಮಳೆ ಬೀಳುವ ತನಕ ಇದೇ ನೀರು ಬಳಕೆಯಾಗಬೇಕಿದೆ ಎಂದರು.

ಈ ಸಂದರ್ಭ ಶಾಸಕ ಎಂ.ಕೆ.ಸೋಮಶೇಖರ್, ಪಿರಿಯಾಪಟ್ಟಣ ಶಾಸಕ ವೆಂಕಟೇಶ್, ಮೂಡಾ ಅಧ್ಯಕ್ಷ ಬಿ.ಧ್ರುವಕುಮಾರ್ ಮತ್ತಿತರರು ಮುಖ್ಯಮಂತ್ರಿಗಳ ಜೊತೆಗಿದ್ದರು.

Leave a Reply

comments

Related Articles

error: