ಮೈಸೂರು

ಕೋಮುವಾದಿಗಳಿಂದ ಪಾಠ ಕಲಿಯುವ ಅಗತ್ಯ ನಮಗಿಲ್ಲ : ಸಿದ್ದರಾಮಯ್ಯ ಕಿಡಿ

ಬಿಜೆಪಿ ತನ್ನ ರಾಜಕೀಯ ಲಾಭಕ್ಕಾಗಿ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕದಡುವ ಕೆಲಸ ಮಾಡುತ್ತಿದ್ದು, ಕೋಮುವಾದಿಗಳಿಂದ ಪಾಠ ಕಲಿಯುವ ಅಗತ್ಯತೆ  ನಮಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ಸೋಮವಾರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾರ ಓಲೈಕೆಗಾಗಿಯೂ ಟಿಪ್ಪು ಜಯಂತಿ ಆಚರಣೆ ಮಾಡುತ್ತಿಲ್ಲ. ಟಿಪ್ಪು ಓರ್ವ ದೇಶಭಕ್ತ. ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ ಹೋರಾಟಗಾರ. ಇಷ್ಟಲ್ಲದೆ ತನ್ನ ಮಕ್ಕಳನ್ನೇ ಅಡವಿಟ್ಟು ಹೋರಾಡಿದಂತಹ ವ್ಯಕ್ತಿ. ಟಿಪ್ಪು ಹಿಂದೂ ವಿರೋಧಿಯಾಗಿದ್ದರೆ ಶ್ರೀರಂಗಪಟ್ಟಣ, ನಂಜನಗೂಡು, ಶೃಂಗೇರಿ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸುತ್ತಿರಲಿಲ್ಲ. 156 ದೇವಸ್ಥಾನಗಳನ್ನು ದತ್ತಿ ತೆಗೆದುಕೊಳ್ಳುತ್ತಿರಲಿಲ್ಲ. ಇಂತಹ ವ್ಯಕ್ತಿಯ ಜಯಂತಿ ಆಚರಿಸುವುದರಲ್ಲಿ ತಪ್ಪೇನಿದೆ. ಶಿವಾಜಿ, ಅಬ್ಬಕ್ಕ, ಕನಕದಾಸರ ಜಯಂತಿಯನ್ನೂ ಆಚರಿಸುತ್ತಿಲ್ಲವೆ? ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಇಲ್ಲಸಲ್ಲದ ಅಪಪ್ರಚಾರ ಮಾಡುವ ಬದಲು ಇತಿಹಾಸವನ್ನು ಓದಿ ತಿಳಿದುಕೊಳ್ಳಲಿ. ಅದನ್ನು ಬಿಟ್ಟು ಇತಿಹಾಸವನ್ನು ತಿರುಚುವ ಕೆಲಸ ಮಾಡಬಾರದು. ಚುನಾವಣೆ ಹತ್ತಿರ ಬಂದಾಗ ಬಿಜೆಪಿಯವರು ಜನರಲ್ಲಿ ಗೊಂದಲ ಮೂಡಿಸುತ್ತಾರೆ. ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು ಎಂದು ಕಿಡಿ ಕಾರಿದರು.

ಸಿಬಿಐ ಚೋರ್ ಬಚಾವೋ ಅಲ್ಲವೇ?

ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಸಿಬಿಐ ಚೋರ್ ಬಚಾವೋ ಸಂಸ್ಥೆ, ಸಿಬಿಐಗೆ ಯಾವ ಪ್ರಕರಣಗಳನ್ನೂ ನೀಡಬೇಡಿ ಎಂದು ಹೇಳುತ್ತಿದ್ದ ಬಿಜೆಪಿಯವರು ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಾಗುವ ಎಲ್ಲಾ ಪ್ರಕರಣಗಳನ್ನು ಸಿಬಿಐಗೆ ವಹಿಸಿ ಎಂದು ಹೇಳುತ್ತಿದ್ದಾರೆ. ಸಿಬಿಐಗೆ ವಹಿಸಿದಾಕ್ಷಣ ಪ್ರಕರಣ ಇತ್ಯರ್ಥವಾಗುವುದಿಲ್ಲ. ಅಷ್ಟಕ್ಕೂ ಕಾಂಗ್ರೆಸ್ ಸರ್ಕಾರ ನಾಲ್ಕೈದು ಪ್ರಕರಣಗಳನ್ನು ಸಿಬಿಐಗೆ ವಹಿಸಿದೆ. ಆದರೆ ಬಿಜೆಪಿ ಎಷ್ಟು ಪ್ರಕರಣಗಳನ್ನು ಸಿಬಿಐಗೆ ನೀಡಿದೆ ಎಂಬುದು ಎಲ್ಲರಿಗೂ ಗೊತ್ತು. ಶೋಭಾ ಕರಂದ್ಲಾಜೆ ಅವರು ರುದ್ರೇಶ್ ಹತ್ಯೆಯ ಹಿಂದೆ ರೋಷನ್ ಬೇಗ್ ಕೈವಾಡವಿದೆ ಎಂದು ನಿರಾಧಾರ ಆರೋಪ ಮಾಡುತ್ತಿದ್ದಾರೆ. ಶೋಭಾ ಕರಂದ್ಲಾಜೆ ಅವರೇ ಮಾಡಿಸಿದ್ದಾರೆ ಎಂದು ನಾವೂ ಆರೋಪಿಸಬಹುದು. ಆದರೆ, ಸಾಕ್ಷಿ ಇಲ್ಲದೆ ರಾಜಕೀಯ ಪ್ರೇರಿತವಾಗಿ ಆರೋಪ ಮಾಡಬಾರದು ಎಂದು ಹೇಳಿದರು.

ಅಧಿವೇಶನಕ್ಕೆ ಸರ್ಕಾರ ಸಿದ್ಧ

ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನಕ್ಕೆ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ವಿರೋಧ ಪಕ್ಷಗಳನ್ನು ಸಮರ್ಥವಾಗಿ ಎದುರಿಸಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದ್ದು ಅಧಿವೇಶನವನ್ನು ಸೂಕ್ತವಾಗಿ ಬಳಸಿಕೊಳ್ಳಲಾಗುವುದು ಎಂದರು. ಪ್ರಿಯಾಂಕ ಖರ್ಗೆ ಮೇಲೆ ಶ್ರೀರಂಗಪಟ್ಟಣದ ದೇವಸ್ಥಾನದ ಭೂಮಿ ಕಬಳಿಕೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿರುವ ಬಗ್ಗೆ ಮಾಹಿತಿ ಇಲ್ಲ. ದಾಖಲೆಗಳನ್ನು ತರಿಸಿಕೊಂಡು ಪರಿಶೀಲಿಸುತ್ತೇನೆ. ಶ್ರೀನಿವಾಸಪ್ರಸಾದ್ ಸಮಾವೇಶ ನಡೆಸಬಾರದು ಎಂದೇನೂ ಇಲ್ಲ. ನಡೆಸಬೇಡಿ ಎಂದು ಯಾರೂ ಹೇಳಿಲ್ಲ. ನಂಜನಗೂಡು ಉಪ ಚುನಾವಣೆಗೆ ಇನ್ನೂ ಅಭ್ಯರ್ಥಿ ಆಯ್ಕೆ ಮಾಡಿಲ್ಲ ಎಂದು ಹೇಳಿದರು.

ಅದ್ಧೂರಿ ಮದುವೆಗೆ ವಿರೋಧ

ಅದ್ಧೂರಿ ಮದುವೆಯನ್ನು ನಾನು ಸದಾ ವಿರೋಧಿಸುತ್ತೇನೆ. ಆಡಂಬರದ ಮದುವೆಗೆ ಕಡಿವಾಣ ಹಾಕುವ ಕಾಯಿದೆಯನ್ನು ಜಾರಿಗೆ ತರುವ ಸಂಬಂಧ ವಿಧಾನಸಭೆಯಲ್ಲಿ ಚರ್ಚಿಸಲಾಗುವುದು. ಜನಾರ್ದನ ರೆಡ್ಡಿ ನೂರಾರು ಕೋಟಿ ಖರ್ಚು ಮಾಡಿ ಮದುವೆ ಮಾಡುತ್ತಿದ್ದು, ಅವರು ನೀಡಿದ ಆಮಂತ್ರಣ ಸ್ವೀಕರಿಸಿದ್ದೇನೆ. ಆಮಂತ್ರಣ ನೀಡಲು ಬಂದಾಗ ತಿರಸ್ಕರಿಸಲು ಆಗುತ್ತದೆಯೇ ಎಂದರು.

ಎಂಎಲ್‍ಸಿ ಆರ್.ಧರ್ಮಸೇನಾ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯ್‍ಕುಮಾರ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು ಮುಖ್ಯಮಂತ್ರಿಗಳ ಜೊತೆಗಿದ್ದರು.

Leave a Reply

comments

Related Articles

error: