ಮೈಸೂರು

ಸರ್ಕಾರ ಸಿಇಟಿ ಮಾದರಿಯಲ್ಲಿ ಹಣ ಸಂಗ್ರಹಿಸಲಿ : ಸರ್ವಜನಾಂಗ ಹಿತರಕ್ಷಣಾ ವೇದಿಕೆ ಒತ್ತಾಯ

ಖಾಸಗಿ ಶಾಲಾ ಕಾಲೇಜುಗಳಲ್ಲಿ ಪೂರ್ವಪ್ರಾಥಮಿಕ, ಕಿರಿಯ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿಪೂರ್ವ ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಕ್ಯಾಪಿಟೇಷನ್ ಹಾಗೂ ಯಥೇಚ್ಛವಾದ ಇತರೆ ಶುಲ್ಕಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವೇ ಸಿಇಟಿ ಮಾದರಿಯಲ್ಲಿ ಹಣವನ್ನು ಕಟ್ಟಿಸಿಕೊಂಡು ಸಂಬಂಧಿಸಿದ ಶಾಲೆಗಳಿಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿ ಸರ್ವಜನಾಂಗ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಖಾಸಗಿ ಶಿಕ್ಷಣ ಸಂಸ್ಥೆಗಳು ದೊಡ್ಡ ಮಾಫಿಯಾ ಗ್ಯಾಂಗ್ ಗಳಂತಾಗಿ ಶಿಕ್ಷಣದ ನೆಪದಲ್ಲಿ ಬಡಬಗ್ಗರು, ದೀನದಲಿತರನ್ನು ಸುಲಿಗೆ ಮಾಡುತ್ತಿವೆ. ಜ್ಞಾನಾರ್ಜನೆಯ ಶಿಕ್ಷಣವು ವ್ಯಾಪಾರೀಕರಣವಾಗುತ್ತಿದೆ. ಇದರಿಂದ ಸರ್ಕಾರ ಸಿಇಟಿ ಮಾದರಿಯಲ್ಲಿ ಶುಲ್ಕವನ್ನು ಡಿಡಿ ಮುಖಾಂತರ ಕಟ್ಟಿಸಿಕೊಂಡು ಸಂಬಂಧಿತ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೆ ಬಿಇಓ ಮುಖಾಂತರ ನೀಡಬೇಕು ಎಂದು ಒತ್ತಾಯಿಸಿದರು.

ವ್ಯಾಪಾರೀಕರಣವಾಗಿರುವ ಸಮವಸ್ತ್ರ, ಪಠ್ಯ ಮತ್ತು ಪಠ್ಯೇತರ ವಸ್ತುಗಳಿಂದ ಸರ್ಕಾರದ ಆದಾಯಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದ್ದರೂ ಆದಾಯ ತೆರಿಗೆ ಇಲಾಖೆ ತಟಸ್ಥವಾಗಿದೆ. ವ್ಯಾಪಾರ ಮಾಡುತ್ತಿದ್ದ ಅಂಗಡಿಗಳ ವ್ಯಾಪಾರಿಗಳ ಮೇಲೆ ಹೊಡೆತ ಬೀಳುತ್ತಿದೆ. ಪೋಷಕರು ಇದರಿಂದ ನಾಲ್ಕುಪಟ್ಟು ಹಣವನ್ನು ತೆರಬೇಕಾಗಿದೆ. ಇದರಿಂದ ಸರ್ಕಾರಿ, ಅನುದಾನಿತ, ಅನುದಾನ ರಹಿತ, ಸಿಬಿಎಸ್ ಸಿ ಶಾಲೆಗಳಲ್ಲಿ ನಾಲ್ಕು ಬಗೆಯ ಸಮವಸ್ತ್ರಗಳನ್ನು ಎಲ್ಲಾ ಕಡೆ ದೊರೆಯುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸರ್ವಜನಾಂಗದ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ವೇಣುಗೋಪಾಲ್, ಎಂ.ಪ್ರಭುದೇವ್, ಎಲ್.ಮಹದೇವಪ್ಪ, ಪಿ.ಮಹದೇವ್, ಹೊಸಟ್ಟಿ ಶಿವಮೂರ್ತಿ ಅಕ್ರಂಪಾಷ ಸೇರಿದಂತೆ 200 ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Leave a Reply

comments

Related Articles

error: