ಮೈಸೂರು

ನ. 13-14: ‘ಸಮುದಾಯ’ದ ರಾಜ್ಯ ಮಟ್ಟದ ಸಮ್ಮೇಳನ – ವಿಚಾರ ಸಂಕಿರಣ

ಮೈಸೂರಿನ ‘ಸಮುದಾಯ’ದ 6ನೇ ರಾಜ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದ್ದು, ಸಮ್ಮೇಳನದಲ್ಲಿ ವಿಚಾರ ಸಂಕಿರಣ, ಹಕ್ಕೊತ್ತಾಯ, ರಾಜಕೀಯ ಹಾಗೂ ಸಾಂಸ್ಕೃತಿಕ ವಿಷಯಾಧಾರಿತವಾಗಿ ಚರ್ಚೆ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ಟಿ.ಸುರೇಂದ್ರರಾವ್ ತಿಳಿಸಿದರು.
ಅವರು, ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನ.13 ಮತ್ತು 14 ರಂದು ಜಯಲಕ್ಷ್ಮೀ ಪುರಂನ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಸಮ್ಮೇಳನವನ್ನು ಆಯೋಜಿಸಲಾಗಿದೆ. 1975 ರಿಂದಲೂ ‘ಸಮುದಾಯ’ವು ಸಕ್ರಿಯವಾಗಿದ್ದು ರಂಗನಾಟಕ, ಸಾಂಸ್ಕೃತಿ ಜಾಥ, ವಿಚಾರ ಸಂಕಿರಣ, ಕವಿಗೋಷ್ಠಿ ಹಾಗೂ ಬೀದಿ ನಾಟಕಗಳ ಮೂಲಕ ಸಾಮಾಜಿಕ ಜನ ಜಾಗೃತಿ ಮೂಡಿಸುತ್ತಿದ್ದು ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಮೂರು ಜಾಥಾಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿದೆ. ‘ಸಮುದಾಯ’ವು ರಾಜ್ಯಾದ್ಯಂತ ಶಾಖೆಗಳನ್ನು ಹೊಂದಿದ್ದು ಪ್ರತಿ ಹತ್ತು ಜನರಿಗೆ ಒಬ್ಬ ಪ್ರತಿನಿಧಿ ಸಮ್ಮೇಳನದಲ್ಲಿ ಭಾಗವಹಿಸುವರು ಎಂದು ತಿಳಿಸಿದರು.
ನ.13ರ ಭಾನುವಾರ ಬೆಳಿಗ್ಗೆ 10.30 ಕ್ಕೆ ಮೈಸೂರು ವಿ.ವಿ.ಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಡಾ. ಅರವಿಂದ ಮಾಲಗತ್ತಿ ಅವರು ಸಮ್ಮೇಳನವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ರಂಗಾಯಣ ಮಾಜಿ ನಿರ್ದೇಶಕ ಜನ್ನಿ ಭಾಗವಹಿಸುವರು. “ಸಾಂಸ್ಕೃತಿಕ ಪ್ರತಿರೋಧಗಳ ಮಾದರಿಗಳು” ವಿಷಯವಾಗಿ ನಡೆಯುವ ವಿಚಾರ ಸಂಕಿರಣದಲ್ಲಿ ರಂಗಕರ್ಮಿ ಪ್ರೊ. ಹೆಚ್.ಎಸ್. ಉಮೇಶ್ -ರಂಗಭೂಮಿ, ಪ್ರೊ. ಶೈಲಜಾ – ಸಂಗೀತ, ಪ್ರೊ. ರಾಜಪ್ಪ ದಳವಾಯಿ – ಸಿನಿಮಾ ಮತ್ತು ಮಾಧ್ಯಮ ವಿಚಾರವಾಗಿ ವಿಷಯ ಮಂಡಿಸುವರು.
ನ. 14ರ ಸೋಮವಾರ ಮಧ್ಯಾಹ್ನ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಜಾನಪದ ತಜ್ಞ ಡಾ. ಹಿ.ಶಿ. ರಾಮಚಂದ್ರೇ ಗೌಡ ಸಮಾರೋಪ ಭಾಷಣ ಮಾಡಲಿದ್ದಾರೆ. ಹಿರಿಯ ರಂಗಕರ್ಮಿ ಪಿ. ಗಂಗಾಧರ ಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಮ್ಮೇಳನದ ಎರಡು ದಿನ ಕಾರ್ಯಕ್ರಮಗಳಿಗೂ ಸಮುದಾಯದ ಅಧ್ಯಕ್ಷ ಪ್ರೊ. ಆರ್.ಕೆ. ಹುಡಗಿ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿ ವಜ್ರಮುನಿ, ಪ್ರಧಾನ ಕಾರ್ಯದರ್ಶಿ ಲ. ಜಗನ್ನಾಥ್ ಉಪಸ್ಥಿತರಿದ್ದರು.

Leave a Reply

comments

Related Articles

error: