ಕ್ರೀಡೆಪ್ರಮುಖ ಸುದ್ದಿಮೈಸೂರು

ರಣಜಿ ಕ್ರಿಕೆಟ್: ಅಸ್ಸಾಂ ವಿರುದ್ಧ 121 ರನ್ ಗಳ ಗೆಲುವು ಸಾಧಿಸಿದ ಕರ್ನಾಟಕ ತಂಡ

ಮೈಸೂರು,ಅ.17-ಇಲ್ಲಿನ ಮಾನಸಗಂಗೋತ್ರಿಯ ಕ್ರೀಡಾಂಗಣದಲ್ಲಿ ನಡೆದ ರಣಜಿ ಕ್ರಿಕೆಟ್ ನಲ್ಲಿ ಕರ್ನಾಟಕ ತಂಡ 121 ರನ್ ಗಳಿಂದ ಅಸ್ಸಾಂ ತಂಡವನ್ನು ಸೋಲಿಸಿ 84ನೇ ಆವೃತ್ತಿಯ ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ.

ವಿನಯ್ ಕುಮಾರ್ ನೇತೃತ್ವದ ಕರ್ನಾಟಕ ತಂಡ ಅಸ್ಸಾಂ ವಿರುದ್ಧ ಇನ್ನಿಂಗ್ಸ್ ನೊಂದಿಗೆ 121 ರನ್ ಗಳ ಗೆಲುವಿನ ಸಂಭ್ರಮ ಆಚರಿಸಿತು. ಮೊದಲು ಬ್ಯಾಟ್ ಮಾಡಿ ಅಸ್ಸಾಂ ಮೊದಲ ಇನ್ನಿಂಗ್ಸ್ ನಲ್ಲಿ ಕರ್ನಾಟಕ ಬೌಲಿಂಗ್ ದಾಳಿಗೆ ತತ್ತರಿಸಿ 145 ರನ್ ಗಳಿಸಲಷ್ಟೆ ಶಕ್ತವಾಯಿತು. ನಂತರ ಬ್ಯಾಟಿಂಗ್ ಮಾಡಿದ ಕರ್ನಾಟಕ 7 ವಿಕೆಟ್ ಗಳ ನಷ್ಟಕ್ಕೆ 469 ರನ್ ಗಳ ಬೃಹತ್ ಮೊತ್ತಕ್ಕೆ ಡಿಕ್ಲೇರ್ ಮಾಡಿಕೊಂಡಿತು. ಕರ್ನಾಟಕ ಬೃಹತ್ ಮೊತ್ತ ಗಳಿಸಲು ಸಮರ್ಥ್ 123, ಕೆ.ಗೌತಮ್ 149 ರನ್ ಗಳ ಅಮೋಘ ಬ್ಯಾಟಿಂಗ್ ನೆರವಾಯಿತು. ಎರಡನೇ ಇನ್ನಿಂಗ್ಸ್ ಆರಂಭಿಸಿದ ಅಸ್ಸಾಂ 203 ರನ್ ಗಳಿಗೆ ಆಲೌಟ್ ಆಯಿತು.

ಸೋಮವಾರ ಎರಡನೇ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿದ್ದ ಅಸ್ಸಾಂ ತಂಡ ಮಂಗಳವಾರ ನಾಲ್ಕನೇ ದಿನದಾಟದಲ್ಲಿ 203 ರನ್ ಗೆ ಆಲೌಟ್ ಆಯಿತು. ಗೋಕುಲ್ ಶರ್ಮಾ ಮತ್ತು ಶಿಬಶಂಕರ್ ರಾಯ್ ಹೊರತುಪಡಿಸಿ ಉಳಿದವರೆಲ್ಲ ಪ್ರತಿರೋಧ ಒಡ್ಡಲು ವಿಫಲರಾದರು. ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ ಶತಕ ಭಾರಿಸಿದ್ದ ಆಫ್ ಸ್ಪಿನ್ನರ್ ಗೌತಮ್ ಒಟ್ಟಾರೆ 7 ವಿಕೆಟ್ ಪಡೆದು ಆಲ್ ರೌಂಡ್ ಆಟ ಪ್ರದರ್ಶಿಸಿದರು.

ಕರ್ನಾಟಕ ತಂಡಕ್ಕೆ ಇನ್ನಿಂಗ್ಸ್ ಗೆಲುವು ದಕ್ಕಿದ್ದರಿಂದ 1 ಬೋನಸ್ ಅಂಕ ಸೇರಿದಂತೆ ಒಟ್ಟು 7 ಪಾಯಿಂಟ್ ಪ್ರಾಪ್ತವಾಯಿತು. ಎ ಗುಂಪಿನ ಅಂಕಪಟ್ಟಿಯಲ್ಲಿ ಕರ್ನಾಟಕ 2ನೇ ಸ್ಥಾನಕ್ಕೆ ಜಂಪ್ ಆಗಿದ್ದು, ಕರ್ನಾಟಕ ತಂಡ ತನ್ನ ಮುಂದಿನ ಪಂದ್ಯವನ್ನು ಅ.24ರಿಂದ ಹೈದರಾಬಾದ್ ವಿರುದ್ಧ ಆಡಲಿದೆ. ಶಿವಮೊಗ್ಗದಲ್ಲಿ ಹೈದರಾಬಾದ್ ವಿರುದ್ಧದ ಪಂದ್ಯ ನಡೆಯಲಿದೆ.

ಸ್ಕೋರ್ ವಿವರ:  ಅಸ್ಸಾಮ್ ಮೊದಲ ಇನ್ನಿಂಗ್ಸ್ 59.1 ಓವರ್ 145 ರನ್ ಆಲೌಟ್ (ಗೋಕುಲ್ ಶರ್ಮಾ 55, ರಿಶವ್ ದಾಸ್ 26 ರನ್ – ಕೆ.ಗೌತಮ್ 20/4, ಶ್ರೇಯಸ್ ಗೋಪಾಲ್ 43/3, ವಿನಯ್’ಕುಮಾರ್ 17/2).

ಕರ್ನಾಟಕ ಮೊದಲ ಇನ್ನಿಂಗ್ಸ್ 126.4 ಓವರ್ 469/7(ಡಿಕ್ಲೇರ್) (ಕೆ.ಗೌತಮ್ 149, ಆರ್.ಸಮರ್ಥ್ 123, ಶ್ರೇಯಸ್ ಗೋಪಾಲ್ 50, ಸ್ಟುವರ್ಟ್ ಬಿನ್ನಿ 41, ಮಯಂಕ್ ಅಗರ್ವಾಲ್ 31, ವಿನಯ್’ಕುಮಾರ್ 27 ರನ್ – ಅರುಪ್ ದಾಸ್ 113/4, ಎಸ್.ಪುರಕಾಯಸ್ಥ 80/3).

ಅಸ್ಸಾಮ್ ಎರಡನೇ ಇನ್ನಿಂಗ್ಸ್ 73.1 ಓವರ್ 203 ರನ್ ಆಲೌಟ್ (ಗೋಕುಲ್ ಶರ್ಮಾ 66, ಶಿಬಶಂಕರ್ ರಾಯ್ 44, ರಿಶವ್ ದಾಸ್ 21 ರನ್ – ಆರ್.ವಿನಯ್’ಕುಮಾರ್ 31/4, ಕೆ.ಗೌತಮ್ 39/3, ಅಭಿಮನ್ಯು ಮಿಥುನ್ 47/3). (ವರದಿ-ಎಂ.ಎನ್)

Leave a Reply

comments

Related Articles

error: