ಕರ್ನಾಟಕಪ್ರಮುಖ ಸುದ್ದಿ

ಕಳಪೆ ಊಟದಿಂದ ಅನಾರೋಗ್ಯ : ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ದಿಢೀರ್ ಪ್ರತಿಭಟನೆ

ಬೆಂಗಳೂರು (ಅ.17): ಕಳಪೆ ಊಟ ಪೂರೈಕೆಯಿಂದ ಆರೋಗ್ಯ ಹಾಳಾಗುತ್ತಿದೆ ಎಂದು ಮತ್ತು ದೀಪಾವಳಿ ಹಬ್ಬಕ್ಕೆ ಪರೋಲ್‍ ನೀಡಲು ನಿರಾಕರಿಸಿದ ಕಾರಣ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಇಂದು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.

ಜೈಲಿನ ಅಧಿಕಾರಿಗಳು ಹೊರಗಿನಿಂದ ಊಟ ತರಲು ಅವಕಾಶ ನೀಡುತ್ತಿಲ್ಲ, ಜೈಲಿನಲ್ಲಿ ಕೊಡುವ ಊಟ ಕಳಪೆ ಗುಣಮಟ್ಟದ್ದಾಗಿದೆ. ಈ ಬಗ್ಗೆ ಹಲವಾರು ಬಾರಿ ದೂರು ನೀಡಿದರೂ ಸುಧಾರಣೆಯಾಗಿಲ್ಲ. ವೈಯಕ್ತಿಕವಾಗಿ ಮನೆಯಿಂದ ಊಟ ತರಿಸಿಕೊಳ್ಳಲು ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಜೈಲಿನ ಊಟ ತಿಂದು ಹಲವಾರು ಮಂದಿಗೆ ಆರೋಗ್ಯ ಹದಗೆಟ್ಟಿದೆ. ಇಂತಹ ಸಂದರ್ಭದದಲ್ಲೂ ದೀಪಾವಳಿ ಹಬ್ಬಕ್ಕಾಗಿ ಪೆರೋಲ್ ಮೇಲೆ ಬಿಡುಗಡೆ ಮಾಡಲು ಅಧಿಕಾರಿಗಳು ಒಪ್ಪುತ್ತಿಲ್ಲ ಎಂಬುದು ಪ್ರತಿಭಟನೆಗೆ ಕಾರಣ ಎನ್ನಲಾಗಿದೆ.

ಇಂದು ಬೆಳಗ್ಗೆ ದಿಢೀರ್ ಪ್ರತಿಭಟನೆ ಆರಂಭವಾದಾಗ ಜೈಲು ಅಧಿಕಾರಿಗಳು ತಬ್ಬಿಬ್ಬಾದರು. ವಿಷಯ ತಿಳಿದ ಕಾರಾಗೃಹ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕ ಎಂ.ಎಸ್.ಮೆಘರಿಕ್ ಸ್ಥಳಕ್ಕೆ ತೆರಳಿ ಪ್ರತಿಭಟನಾ ನಿರತ ಕೈದಿಗಳ ಜತೆ ಮಾತುಕತೆ ನಡೆಸಿದರು. ಈ ವೇಳೆ ತಮ್ಮ ಅಳಲು ತೋಡಿಕೊಂಡ ಕೈದಿಗಳು, ಜೈಲಿನಲ್ಲಿ ಮೂಲಸೌಲಭ್ಯಗಳ ಕೊರತೆ ಇದೆ. ಎಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆಹಾರದ ಗುಣಮಟ್ಟ ಕಳಪೆಯಾಗಿದ್ದು, ಹಲವಾರು ಕೈದಿಗಳು ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಹೀಗಾಗಿ ಪ್ರತಿಭಟನೆ ನಡೆಸುತ್ತಿರುವುದಾಗಿ ಕೈದಿಗಳು ಹೇಳಿದರು ಎನ್ನಲಾಗಿದೆ.

ಶಶಿಕಲಾ ಎಫೆಕ್ಟ್ !

ಇದೇ ಜೈಲಿನಲ್ಲಿ ಇತ್ತೀಚೆಗೆ ತಮಿಳುನಾಡಿನ ಶಶಿಕಲಾ ಅವರಿಗೆ ವಿಐಪಿ ಸೌಲಭ್ಯ-ಸವಲತ್ತುಗಳನ್ನು ನೀಡುತ್ತಿರುವ ವಿಷಯ ಬಯಲಾಗಿತ್ತು. ಶಶಿಕಲಾ ಪ್ರಕರಣವು ಹಿಂದಿನ ಪೊಲೀಸ್ ಮಹಾನಿರ್ದೇಶಕ ಸತ್ಯನಾರಾಯಣರಾವ್ ನಡುವೆ ಬಹಿರಂಗ ಆರೋಪ, ಪ್ರತ್ಯಾರೋಪಗಳು ಕೇಳಿ ಬಂದಿದ್ದವು.

ಅನಂತರ ಜೈಲು ಅಧಿಕಾರಿಗಳು ಕೈದಿಗಳನ್ನು ನೋಡಲು ಬರುವವರನ್ನು ತಪಾಸಣೆ ನಡೆಸುವಂತೆ ಮತ್ತು ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗಿತ್ತು. ಹೊರಗಿನಿಂದ ಊಟ ತಂದು ಕೊಡುವುದಕ್ಕೂ ಕಡಿವಾಣ ಹಾಕಲಾಗಿತ್ತು. ಇದರಿಂದ ಕೈದಿಗಳಿಗೆ ಮನೆ ಊಟ ಸರಬರಾಜು ನಿಂತು ಹೋಯ್ತು. ಮತ್ತು ಜೈಲಿನಲ್ಲಿ ಕೊಡುವ ಊಟವೂ ಗುಣಮಟ್ಟವಿಲ್ಲದ ಕಾರಣ ಅಸಮಾಧಾನ ಗೊಂಡ ಕೈದಿಗಳು ಇಂದು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

(ಎನ್‍ಬಿಎನ್‍)

Leave a Reply

comments

Related Articles

error: