ಕರ್ನಾಟಕಪ್ರಮುಖ ಸುದ್ದಿಮೈಸೂರು

ಕಾವೇರಿ ವಿವಾದಕ್ಕೆ ತಾತ್ವಿಕ ಅಂತ್ಯ ಕಂಡುಕೊಳ್ಳಲೇಬೇಕು: ಡಾ. ಕೆ.ಪಿ. ಬಸವರಾಜು

ಕಾವೇರಿ ಸಮಸ್ಯೆಗೆ ತಾತ್ವಿಕ ಅಂತ್ಯ ಕಂಡುಕೊಳ್ಳಲು ಸರ್ಕಾರಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಆಸಕ್ತಿ ತೋರುತ್ತಿಲ್ಲ. ಆದ್ದರಿಂದ ಸಮಸ್ಯೆಯು ಮತ್ತಷ್ಟು ಜಟಿಲವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ವರಿಷ್ಠ, ಕರ್ನಾಟಕ ಕಾವೇರಿ ಕುಟುಂಬ ಮತ್ತು ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ ಮೈಸೂರು ಛಾಪ್ಟರ್ ಅಧ್ಯಕ್ಷ ಡಾ. ಕೆ.ಪಿ. ಬಸವರಾಜು ದೂರಿದರು.

ಅವರು, ಈ ಬಗ್ಗೆ ಸೋಮವಾರ ಸುದ್ದಿಗೋಷ್ಠಿ ನಡೆಸಿ ಸಾವಿರಾರು ವರ್ಷಗಳಿಂದಲೂ ತಮಿಳುನಾಡಿನಲ್ಲಿ ಆಳ್ವಿಕೆ ನಡೆಸಿದ ರಾಜ ಸಂಸ್ಥಾನಗಳು ಜನರ ಹಿತಕಾಪಾಡುವಲ್ಲಿ ಯಶಸ್ವಿಯಾಗಿವೆ. ಅಂದಿನಿಂದ ಇಂದಿನವರೆಗೂ ರಾಜ್ಯಕ್ಕೆ ಕಾವೇರಿ ನೀರು ಹಂಚಿಕೆಯಲ್ಲಿ ಅನ್ಯಾಯವಾಗುತ್ತಲೇ ಇದೆ. ದುರ್ಬಲರು ಹಾಗೂ ದೌರ್ಭಾಗ್ಯವಂತರಾದ ಕರ್ನಾಟಕದವರು ತಾಳ್ಮೆಯಿಂದ ಎಲ್ಲವನ್ನು ಸಹಿಸಿಕೊಳ್ಳುತ್ತಲೇ ಇದ್ದೇವೆ. ತಮಿಳುನಾಡಿನ ಸೇಲಂ ಹಾಗೂ ಇತರೆಡೆ ಸುಮಾರು 20 ಕಿಮಿ ದೂರ ಅನಧಿಕೃತವಾಗಿ ನಾಲ್ಕು ಲಕ್ಷ ಹೆಕ್ಟೇರ್ ಪ್ರದೇಶವನ್ನು ನೀರಾವರಿಯನ್ನಾಗಿ ಪರಿವರ್ತಿಸಿದ್ದು ಅಲ್ಲಿ ಬೆಳೆದ ಬೆಳೆಯನ್ನು ಕಾಪಾಡಲು ಪಿತ್ತೂರಿ ನಡೆಸಿ ನೀರು ಹಂಚಿಕೆ ವಿವಾದದಲ್ಲಿ ಸಂವಿಧಾನದಲ್ಲಿ ಉಲ್ಲೇಖವೇ ಇಲ್ಲದ ಸುಪ್ರೀಕೋರ್ಟ್ ಗೆ ಪದೆ ಪದೇ ಎಡತಾಕಿ ಗೆಲುವು ಸಾಧಿಸುತ್ತಿದೆ. 28 ಲಕ್ಷ ಎಕರೆ ಬದಲಾಗಿ 34 ಲಕ್ಷ ಹೆಕ್ಟೇರ್ ಪ್ರದೇಶವನ್ನು ಅನಧಿಕೃತವಾಗಿ ನೀರಾವರಿಯಾಗಿ ಅಭಿವೃದ್ಧಿಪಡಿಸಿದೆ. 1924ರಲ್ಲಿ ಮದ್ರಾಸ್ ಒಪ್ಪಂದವೇ ಇಂದಿಗೂ ಅನುಷ್ಠಾನದಲ್ಲಿರುವುದು ದುಃಖಕರ. ಸ್ವಾತಂತ್ರ್ಯದ ನಂತರ ಸಂವಿಧಾನ ಬದ್ಧ ಒಪ್ಪಂದವೇ ಇಲ್ಲದೇ  ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ವಹಿಸಿರುವುದು ರಾಜ್ಯದ ದೌರ್ಭಾಗ್ಯವೇ ಸರಿ ಎಂದರು.

ರಾಜ್ಯದಲ್ಲಿ ಕೇವಲ 7 ಲಕ್ಷ  ಹೆಕ್ಟೇರ್ ಪ್ರದೇಶ ಮಾತ್ರ ನೀರಾವರಿಗೆ ಒಳಪಟ್ಟಿದ್ದು ಇನ್ನುಳಿದ ಪ್ರದೇಶವನ್ನು ಸರ್ಕಾರ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು. ನ್ಯಾಯಾಧೀಕರಣ ನೀಡಿದ ವರದಿ ಆಧರಿಸಿ ಸುಪ್ರೀಂ ಕೋರ್ಟ್ ನೀರು ಹಂಚಿಕೆ ಮಾಡಿತ್ತು, ಆದರೂ ಟ್ರಿಬ್ಯೂನಲ್ ಪಿಟಿಷನ್ ಹಾಕಿದಾಗ ರಾಜ್ಯಗಳಿಗೆ ಛೀಮಾರಿ ಹಾಕಬೇಕಾಗಿತ್ತು. ತಮಿಳುನಾಡಿನವರು ನ್ಯಾಯಾಂಗದಲ್ಲಿ ರಾಜಕೀಯದಲ್ಲಿ ಪ್ರಭಾವಿಗಳಾಗಿದ್ದು ತಮ್ಮ ರಾಜ್ಯದ ಹಿತ ಸಾಧಿಸಲು ಪ್ರಭಾವ ಬಳಸುತ್ತಿದ್ದಾರೆ. ಪ್ರಸ್ತುತ ಸ್ಥಿತಿಯಲ್ಲಿ ಮೇಕೆದಾಟು ಹಾಗೂ ಹೊಗೇನೆಕಲ್ ಯೋಜನೆಗಳು ಪೂರ್ಣವಾಗುವುದಿಲ್ಲ. 1990ರಿಂದ ಸುದೀರ್ಘ ವಿಚಾರಣೆ ನಡೆಸಿ ಇನ್ನೇನು ನ್ಯಾಯಾಧೀಕರಣದ ತೀರ್ಪು ಹೊರಬೀಳಲಿದ್ದು ಅಷ್ಟರೊಳಗೆ ಸರ್ಕಾರವು ಸ್ವಇಚ್ಛೆಯಿಂದ ರಾಜ್ಯದಲ್ಲಿ ಹನ್ನೊಂದು ಲಕ್ಷ ಎಕರೆ ನೀರಾವರಿ ಪ್ರದೇಶವನ್ನು ಅಭಿವೃದ್ಧಿಪಡಿಸಲಿ ಎಂದು ಆಶಿಸಿದರು.

ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಪಕ್ಷಾತೀತವಾಗಿ ಒಂದಾಗಿ ಸಂಘ ಸಂಸ್ಥೆಗಳು ಸಂಘಟಿತರಾಗಿ ಹೋರಾಡುವ ಮೂಲಕ ಕಾವೇರಿ ವಿವಾದಕ್ಕೆ ತಾತ್ವಿಕ ಪರಿಹಾರ ಕಂಡುಕೊಳ್ಳಬೇಕು. ರಾಜ್ಯದ ಜನರ ಹಾಗೂ ರೈತರ ಹಿತ ಕಾಪಾಡಬೇಕು ಎಂದು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ನಾಗನಹಳ್ಳಿ ವಿಜಯೇಂದ್ರ ಹಾಗೂ ಮಂಟಗಳ್ಳಿ ಮಹೇಶ್ ಉಪಸ್ಥಿತರಿದ್ದರು.

Leave a Reply

comments

Related Articles

error: