ಕರ್ನಾಟಕಮೈಸೂರುಸಿಟಿ ವಿಶೇಷ

ಪಾತಾಳಕ್ಕೆ ಕುಸಿದ ಬೆಲೆ; ಹತಾಶ ಪರಿಸ್ಥಿತಿಯಲ್ಲಿ ಟೊಮೆಟೊ ಬೆಳೆದ ರೈತ

ನಾಳೆ ಹೇಗೆ.. ನಾಡಿದ್ದು ಹೇಗೆ..? ಮಕ್ಕಳು ಮರಿ ಸಂಸಾರವನ್ನು ನಿಭಾಯಿಸುವುದು ಹೇಗೆ? ಎನ್ನುವ ಉತ್ತರವಿಲ್ಲದ ದುಗುಡವನ್ನೇ ಹೊತ್ತಂತಿರುವ ಬಾಡಿದ ಮುಖ… ಸದ್ಯಕ್ಕೆ ಇದು ಟೊಮೇಟೊ ಬೆಳೆದ ರೈತನ ಕುರಿತ ವಿವರಣೆ. ಯಾಕೆ ಅಂತೀರಾ? ಮುಂದೆ ಓದಿ.

ಟೊಮೇಟೊದ ಬೆಲೆ ಈಗ ಕೆ.ಜಿ.ಗೆ 1 ರೂ.ಗಿಂತ ಕೆಳಗೆ ಕುಸಿದಿದೆ! ಆಶ್ಚರ್ಯವಾದರೂ ಇದು ಸತ್ಯ. ಕೆ.ಜಿ.ಗೆ ಕೇವಲ ಒಂದು ರೂಪಾಯಿಗಿಂತ ಕಡಿಮೆ. ಬನ್ನಿ ಬನ್ನಿ ತಗೊಳ್ಳಿ. 25 ಕೆಜಿ ಬಾಕ್ಸ್ ಗೆ ಕೇವಲ 20 ರೂಪಾಯಿ ಎನ್ನುವ ನಿರಾಶಾದಾಯಕ ಕೂಗು ಹತಾಶ ರೈತರದ್ದು. ಇದೇನು ನಿನ್ನೆ ಮೊನ್ನೆ ಐದು ರೂಪಾಯಿ ಕೆ.ಜಿ. ಇದ್ದ ಟೊಮೆಟೊ ಇಂದು ಇಷ್ಟರ ಮಟ್ಟಿಗೆ ಕುಸಿದಿದೆಯಲ್ಲಾ ಎನ್ನುವ ಕುತೂಹಲದಿಂದಲೇ ರೈತರೊಂದಿಗೆ ಮಾತಿಗಿಳಿದ ‘ಸಿಟಿಟುಡೆ’ ಜೊತೆ ಟೊಮೆಟೊ ಬೆಳೆದ ರೈತ ಲೋಕೇಶ ಸೇರಿದಂತೆ ಅನೇಕ ರೈತರು ತಮ್ಮ ದುಗುಡ ತೋಡಿಕೊಂಡರು.

ಫಸಲು ಇದ್ದಾಗ ಬೆಲೆ ಇಲ್ಲ; ಬೆಲೆ ಇದ್ದಾಗ ಫಸಲು ಇಲ್ಲ

ಭಾರತದಲ್ಲಿ ಸುಮಾರು 800 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗುತ್ತದೆ. ಮೈಸೂರು ತಾಲೂಕಿನಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಫಸಲು ಸಮೃದ್ಧವಾಗಿ ಬಂದಿದೆ. ಒಂದು ಬಾರಿ ಕುಯ್ಲಿಗೆ ಪ್ರತಿ ಎಕರೆಗೆ ಸುಮಾರು 50 ಕ್ರೇಟ್ ಇಳುವರಿ ಬರುತ್ತದೆ. ಆದರೆ ಈ ಬಾರಿ ಮಳೆ ಕಡಿಮೆಯಾದ್ದರಿಂದ ಅತ್ಯಧಿಕ ಇಳುವರಿ ಬಂದಿದೆ. ಮಳೆಯಾದರೆ ಮಳೆ ಹೊಡೆತಕ್ಕೆ ಟೊಮೋಟೊ ಬೆಳೆ ಹಾಳಾಗಿ ಕೊಳೆತು ಹೋಗುತ್ತಿತ್ತು. ಈ ಬಾರಿ ಮಳೆಯಿಲ್ಲದೆ ಫಸಲು ಕೈತುಂಬಾ ಬಂದಿದೆ. ಆದರೇ ದಿಢೀರನೆ ಬೆಲೆ ಕುಸಿದಿದ್ದು ಟೊಮೆಟೊವನ್ನು ಕೇಳುವರೇ ಇಲ್ಲ. ವರ್ಷದುದ್ದಕ್ಕೂ ಬೇಡಿಕೆಯಿರುವ ತರಕಾರಿ ಟೊಮೇಟೊ ಕಳೆದ ಮೇ ತಿಂಗಳಿನಲ್ಲಿ ಕೆ.ಜಿ.ಗೆ 50 ರಿಂದ 80 ರೂಪಾಯಿ ಇತ್ತು. ಇಂದು ಬೆಲೆ ಇಲ್ಲದೆ ಬೆಳೆದ ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ. ಕೈತುಂಬಾ ಫಸಲು ಬಂದರೂ ಬೆಲೆ ಇಲ್ಲ.

ಆರ್.ಎಂ.ಸಿ.ಯಲ್ಲಿ ಕೇಳುವರೇ ಇಲ್ಲ

“ಎಂ.ಜಿ. ರಸ್ತೆಯ ಗನ್ ಮಾರ್ಕೆಟ್ ನಲ್ಲಿ ಸ್ವಲ್ಪ ಸಗಟು ವ್ಯಾಪಾರ ನಡೆಯುವುದು. ತಳ್ಳುವ ಗಾಡಿ ಅಥವಾ ಚಿಲ್ಲರೆ ವ್ಯಾಪಾರಿಗಳು, ಸಣ್ಣ ಪುಟ್ಟ ಅಂಗಡಿಯವರು, ಮದುವೆ, ಮುಂಜಿ ಇನ್ನಿತರ ಸಮಾರಂಭಗಳಿಗೆ ಇಲ್ಲಿಂದಲೇ ಹೆಚ್ಚು ತರಕಾರಿ ಖರೀದಿಸುವುದರಿಂದ ಸ್ವಲ್ಪ ಮಟ್ಟಿನ ವ್ಯಾಪಾರವನ್ನು ನಿರೀಕ್ಷಿಸಬಹುದು ಅಷ್ಟೆ. ಬೆಳಗ್ಗೆ ನಾಲ್ಕು ಗಂಟೆಗೆ ಬಂದವರು ಮಧ್ಯಾಹ್ನ ಹನ್ನೆರಡು ಗಂಟೆಯವರೆಗೂ ಒಳ್ಳೆಯ ವ್ಯಾಪಾರವಾಗಬಹುದು ಎಂಬ ಭರವಸೆಯಿಂದ ಬರುತ್ತೇವೆ. ಕೊನೆಗೆ ಉಳಿದದ್ದನ್ನು ಹತಾಶೆಯಿಂದ ರಸ್ತೆಗೆ ಚೆಲ್ಲಿ ಕೈತೊಳೆದುಕೊಂಡು ಹೋಗುತ್ತೇವೆ” ಎನ್ನುವಾಗ ಜಯಪುರ ಹೋಬಳಿಯ ಚುಂಚುರಾಯನಹುಂಡಿ ಗ್ರಾಮದ ರೈತ ಪ್ರಕಾಶ್  ಕಣ್ಣಾಲಿಗಳು ತೇವವಾದವು.

ಆಟೋ ಬಾಡಿಗೆಯೂ ಗಿಟ್ಟುವುದಿಲ್ಲ

“ಟೊಮೆಟೊ ಬೆಳೆಯಲು ಏಕರೆಗೆ 30 ರಿಂದ 50 ಸಾವಿರ ರೂ. ಖರ್ಚು ತಗಲುತ್ತದೆ. ದುಬಾರಿ ಕೂಲಿ ಜತೆಗೆ ನಿರ್ವಹಣೆ-ಸಾಗಣೆ ವೆಚ್ಚ ಹೆಚ್ಚಾದ್ದರಿಂದ ಹಾಕಿದ ಬಂಡವಾಳವೂ ವಾಪಸ್ ಬರುವುದಿಲ್ಲ. ಆಟೋ ಬಾಡಿಗೆಯೂ ಗಿಟ್ಟುವುದಿಲ್ಲ. ಮೊದಲೆಲ್ಲ ತಮಿಳುನಾಡಿಗೆ ಲಾರಿಗಟ್ಟಲೆ ಟೊಮೆಟೊ ಸರಬರಾಜು ಮಾಡುತ್ತಿದ್ದೆವು. ಒಳ್ಳೆಯ ಬೆಲೆಯೂ ಲಭಿಸುತ್ತಿತ್ತು. ಕಾವೇರಿ ಗಲಾಟೆ ಕಮ್ಮಿಯಾಗಿದ್ದರೂ ಗಡಿಯಲ್ಲಿ ಆತಂಕ ಕಮ್ಮಿಯಾಗಿಲ್ಲ. ಅಲ್ಲಿಂದ ಬರಲು ಲಾರಿ ಚಾಲಕರು ಅಂಜುವರು. ಹಾಗಾಗಿ ಕೇವಲ ಮೈಸೂರಿನಲ್ಲಿಯೇ ಎಷ್ಟು ಖರ್ಚಾಗಬಹುದು ಹೇಳಿ” ಎಂದು ಪ್ರಶ್ನೆ ಹಾಕಿದ್ದು ಹೆಚ್.ಡಿ. ಕೋಟೆಯ ಕಾಡಸೂರು ರೈತ ಕುಮಾರ.

“ಮಾರ್ಕೆಟ್ ನಲ್ಲಿ ಪ್ರತಿನಿತ್ಯ ಕನಿಷ್ಠವೆಂದರೂ ಎರಡು ಸಾವಿರ ಕ್ರೇಟ್ ಟೊಮೇಟೊ ಬರುವುದು. ಮೈಸೂರಿನ ಸುತ್ತಮುತ್ತಲಿನ ಉಮ್ರಗಳ್ಳಿ, ಜಯಪುರ, ಹಾರೋಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಸಾವಿರಾರು ಎಕರೆ ಸಾಲ ಮಾಡಿ ಟೊಮೆಟೊ ಬೆಳೆದ ರೈತರು ಬೆಲೆಯಿಲ್ಲದೆ ವಿಷ ಕುಡಿಯುವ ಹೊತ್ತು ಬಂದಿದೆ ಎನ್ನುತ್ತಾರೆ” ರೈತ ಲೋಕೇಶ್.

ಹೋಲ್ಸೇಲ್ ಬೆಲೆಯಲ್ಲಿ ಇಷ್ಟೊಂದು ಕುಸಿದಿರುವ ಟೊಮೆಟೊ, ಚಿಲ್ಲರೆ ವ್ಯಾಪಾರದಲ್ಲಿ ಕೆ.ಜಿ.ಗೆ 5 ರೂಪಾಯಿ ಹಾಗೂ ಅದಕ್ಕಿಂತಲೂ ಅಧಿಕವಾಗಿಯೇ ಇದ್ದು ಮಧ್ಯವರ್ತಿಗಳೇ ಲಾಭ ಹೊಡೆಯುತ್ತಿದ್ದಾರೆ.

ಸಾಲದಲ್ಲಿ ರೈತರು

ಕಳೆದೆರಡು ವರ್ಷದಿಂದಲೂ ಮಳೆಯಿಲ್ಲದೇ ಬರದ ಛಾಯೆ ಆವರಿಸಿ ಅರ್ಧ ನಲುಗಿಹೋಗಿರುವ ರೈತರು, ಬೆಳೆಗೆ ಬೆಲೆಯಿಲ್ಲದೆ ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿ ಗಾಯದ ಮೇಲೆ ಬರೆ ಎಳೆದಂತ ಸಂದರ್ಭಕ್ಕೆ ಸಿಲುಕಿದ್ದಾರೆ. ಒಂದು ಫಸಲು ತೆಗೆಯಲು ಎರಡು ಮೂರು ಲಕ್ಷ ಸಾಲ ಮಾಡಿದ್ದು, ಬೆಳೆ ಮಾರಿ ಬಂದ ಹಣದಲ್ಲಿ ಕೇವಲ ಬಡ್ಡಿ ಕಟ್ಟುವುದೂ ದುಸ್ತರವಾಗಿದೆ. ಹೀಗಾಗಿ ರೈತರು ಇತ್ತೀಚೆಗೆ ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದಾರೆ ಎನ್ನುತ್ತಾರೆ ಈ ರೈತರು.

ದೇಶದ ಬೆನ್ನೆಲುಬು ಎಂದು ವ್ಯಾಖ್ಯಾನಿಸಲಾಗುತ್ತಿದ್ದ ರೈತರ ಇಂದಿನ ದುಃಸ್ಥಿತಿ ಕಂಡು ಮನಸು ಭಾರವಾಯ್ತು.

~ ಕೆ.ಎಂ. ರೇಖಾ ಪ್ರಕಾಶ್

20161107_085421-web

Leave a Reply

comments

Related Articles

error: