ಮೈಸೂರು

ಸೊಳ್ಳೆ ಉತ್ಪತ್ತಿ ತಾಣವಾದ ಸಬ್ ವೇ : ಗಮನ ಹರಿಸದ ಮನಪಾ

ಮೈಸೂರು,ಅ.18:- ನಗರದ ಹೃದಯಭಾಗದಲ್ಲಿರುವ ಸಯ್ಯಾಜಿರಾವ್ ರಸ್ತೆಯಲ್ಲಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗಲೆಂದು ನಿರ್ಮಿಸಿದ ಸಬ್ ವೇ ಇದೀಗ ಸೊಳ್ಳೆ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ.

ಸಯ್ಯಾಜಿ ರಾವ್ ರಸ್ತೆ ಸದಾ ವಾಹನಗಳ ದಟ್ಟಣೆಯಿಂದ ಕೂಡಿರುತ್ತಿದ್ದು, ಪಾದಚಾರಿಗಳಿಗೆ ಒಂದು ಕಡೆಯಿಂದ ಇನ್ನೊಂದು ಕಡೆ ಹೋಗಲು  ಅನುಕೂಲವಾಗಲೆಂದು ಕೋಟ್ಯಾಂತರ ರೂ ಖರ್ಚು ಮಾಡಿ ಸಬ್ ವೇ ನಿರ್ಮಿಸಲಾಗಿದೆ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಸಬ್ ವೇ ನಲ್ಲಿ ನೀರು ನಿಂತುಕೊಂಡು ಕೆರೆಯಂತಾಗಿದೆ. ನೀರು ನಿಂತು ಬಹಳ ದಿನವಾಗಿದ್ದು ಅಲ್ಲಿ ಸೊಳ್ಳೆ ಉತ್ಪತ್ತಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂಬ ಮಾತೂ ಕೇಳಿ ಬರುತ್ತಿದೆ.  ಸಬ್ ವೇ ಇರುವ ಸ್ಥಳ  ಮೇಯರ್ ಎಂ.ಜೆ.ರವಿಕುಮಾರ್ ಅವರ ವಾರ್ಡ್ ಗೆ ಸಂಬಂಧಿಸಿದ್ದಾಗಿದ್ದು, ಅವರು ಕೂಡ ಇತ್ತ ಗಮನ ಹರಿಸಿಲ್ಲವೇ.ಎಂಬ ಪ್ರಶ್ನೆ ಉದ್ಭವವಾಗಿದೆ. ಅ.13ರಂದು ಮೇಯರ್ ರವಿಕುಮಾರ್ ಅವರು ನಗರ ಪ್ರದಕ್ಷಿಣೆ ಹಾಕಿದ್ದರು. ಆಗಲೂ ಅವರ ಗಮನಕ್ಕೆ ಈ ಸಬ್ ವೇ ಯಲ್ಲಿ ನೀರು ತುಂಬಿರುವುದು ಗಮನಕ್ಕೆ ಬಂದಿಲ್ಲ. ಸಂಬಂಧಪಟ್ಟವರು ಮಾಹಿತಿ ಪಡೆದು ನೀರನ್ನು ಹೊರಹಾಕುವ ಸಾಹಸಕ್ಕೆ ಕೈಹಾಕಿಲ್ಲ.  ಸಾರ್ವಜನಿಕರಿಗೆ ಸಬ್ ವೇ ಮೂಲಕ ಸಾಗಲು ಸಾಧ್ಯವಾಗಷ್ಟು ನೀರು ನಿಂತಿದ್ದು, ಈ ರೀತಿ ನೀರು ನಿಲ್ಲುತ್ತಿದ್ದರೆ ಸಬ್ ವೇ ಅಗತ್ಯವಾದರೂ ಏನಿತ್ತು. ಅಷ್ಟೊಂದು ಹಣ ಖರ್ಚು ಮಾಡಿ ಜನರಿಗೆ ಉಪಯೋಗವಾಗುತ್ತಿದೆಯೋ ಇಲ್ಲವೂ,  ಜನರಿಗೆ ಸಂಚರಿಸಲು ಅನುಕೂಲವಾಗಿದೆಯೋ ಇಲ್ಲವೋ ಎಂಬ ಕುರಿತು ಕನಿಷ್ಠ ಮಾಹಿತಿಯನ್ನೂ ಪಡೆಯದಿದ್ದ ಮೇಲೆ ಇದರ ನಿರ್ಮಾಣದ ಅಗತ್ಯವಿರಲಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಇನ್ನಾದರೂ ಮಹಾನಗರಪಾಲಿಕೆಯ ಅಧಿಕಾರಿಗಳು ನೀರನ್ನು ಹೊರಹೋಗುವಂತೆ ಮಾಡಿ ಜನರಿಗೆ ಸಬ್ ವೇ ಮೂಲಕ ಸಾಗಲು ಅನುವು ಮಾಡಿಕೊಡುವರೇ ಎಂಬುದನ್ನು ಕಾದು ನೋಡಬೇಕಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: