ದೇಶಪ್ರಮುಖ ಸುದ್ದಿವಿದೇಶ

ಸಿಪಿಇಸಿ ಯೋಜನೆಯನ್ನು ತಕ್ಷಣ ನಿಲ್ಲಿಸಿ : ಚೀನಾಗೇ ಬಲೂಚಿಸ್ತಾನ್ ನಾಯಕರ ಆಗ್ರಹ

ಜಿನೆವಾ/ಟೊರಂಟೊ, ಪ್ರಮುಖ ಸುದ್ದಿ (ಅ.18): ಚೀನಾ-ಪಾಕಿಸ್ತಾನ್ ಎಕನಾಮಿಕ್ ಕಾರಿಡಾರ್ ಯೋಜನೆಯ ಕಾಮಗಾರಿಗಳನ್ನು ತಕ್ಷಣವೇ ನಿಲ್ಲಿಸಬೇಕೆಂದು ಬಲೂಚಿಸ್ತಾನದ ದೇಶಾಂತರ ನಾಯಕರು (ರಾಜಕೀಯ ಕಾರಣಕ್ಕಾಗಿ ಬೇರೆ ದೇಶದಲ್ಲಿ ಆಶ‍್ರಯ ಪಡೆದವರು) ಚೀನಾಗೆ ಆಗ್ರಹಿಸಿದ್ದಾರೆ.

ಈ ಯೋಜನೆ ಜಾರಿಯಿಂದಾಗಿ ಬಲೂಚಿಸ್ತಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಜೊತೆಗೆ ಪಾಕಿಸ್ತಾನದಲ್ಲಿ ಚೀನಾ ನಿರ್ಮಿಸುತ್ತಿರುವ ಈ ಯೋಜನೆಗೆ ಬಲೂಚಿಸ್ತಾನವೇ ದ್ವಾರವಾಗಿದ್ದರೂ ಬಲೂಚಿಸ್ತಾನದ ಹಿತಾಸಕ್ತಿಯನ್ನೇ ಕಡೆಗಣಿಸಲಾಗಿದೆ ಎಂದು ಈ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಪಿಇಸಿ ಯೋಜನೆಯು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್‍ ಅಧಿಕಾರಾವಧಿಯಲ್ಲಿ ಕೈಗೊಂಡ ಮಹತ್ವಾಕಾಂಕ್ಷಿ ಒನ್‍ಬೆಲ್ಡ್ ಒನ್‍ರೋಡ್‍ ಯೋಜನೆಯ ಪ್ರಮುಖ ಅಂಗವಾಗಿದ್ದು, ಅತ್ತ ಚೀನಾದಲ್ಲಿ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರು ಕಮ್ಯುನಿಷ್ಟ್ ಪಾರ್ಟಿಯ ಹುದ್ದೆಯಲ್ಲಿ ಮತ್ತೊಂದು ಅವಧಿಗೆ ಮುಂದುವರಿಯಲು ಪುನಾರಾಯ್ಕೆಯಾಗಿರುವ ದಿನವೇ ಇತ್ತ ಬಲೂಚಿಸ್ತಾನದ ದೇಶಾಂತರ ನಾಯಕರು ಸಿಪಿಇಸಿ ಯೋಜನೆಯನ್ನು ನಿಲ್ಲಿಸುವಂತೆ ಆಗ್ರಹಪಡಿಸಿದ್ದಾರೆ.

ಚೀನಾ ವಿರುದ್ಧ ಭುಗ್ತಿ ವಾಗ್ದಾಳಿ:

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪರಿಷನತ್‍ನಲ್ಲಿ ಬಲೂಚಿಸ್ತಾನದ ಪ್ರತಿನಿಧಿಯಾಗಿರುವ ಅಬ್ದುಲ್ ನವಾಜ಼್ ಭುಕ್ತಿ ಅವರು ಚೀನಾ ವಿರುದ್ಧ ವಾಗ್ದಾಳಿ ನಡೆಸಿದ್ದು, “ಚೀನಾ ವಿವಾದಾತ್ಮಕ ಪ್ರದೇಶದಲ್ಲಿ ಸಿಪಿಇಸಿ ಯೋಜನೆ ಜಾರಿಗೊಳಿಸಲು ಪ್ರಯತ್ನಿಸುತ್ತಿದೆ. ತಕ್ಷಣ ಈ ಯೋಜನೆಯ ಕಾಮಗಾರಿಗಳನ್ನು ನಿಲ್ಲಿಸದೇ ಹೋದಲ್ಲಿ ಬಲುಚಿಸ್ಥಾನದಲ್ಲಿ ಚೀನಾ ಬಂಡುಕೋರರ ದಾಳಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಸಿಂಧ್‍ನಲ್ಲೂ ವಿರೋಧ:

ಪಾಕಿಸ್ತಾನದ ದೊಡ್ಡ ಪ್ರಾಂತ್ಯವಾದ ಬಲೂಚಿಸ್ತಾನ ಮಾತ್ರವಲ್ಲದೆ, ಮತ್ತೊಂದು ಪ್ರಮುಖ ಪ್ರಾಂತ್ಯ ಸಿಂಧ್‍ನಲ್ಲೂ ಚೀನಾದ ಯೋಜನೆಗೆ ವಿರೋಧ ವ್ಯಕ್ತವಾಗಿದೆ. ಅಮೆರಿಕ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಅವರು ಸೆನೆಟ್‍ನ ಸೇನಾ ಸೇವಾ ಸಮಿತಿಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದು, ಚೀನಾದ ಒನ್‍ಬೆಲ್ಟ್ ಒನ್‍ರೋಡ್ ಯೋಜನೆಯು ವಿವಾದಾತ್ಮಕ ಪ್ರದೇಶದಲ್ಲಿ ಹಾದುಹೋಗುತ್ತದೆ ಎಂದು ಉಲ್ಲೇಖಿಸಿದ್ದಾರೆ. ಈ ಬೆಳವಣಿಗೆಯ ನಂತರ ಸಿಂಧ್ ನಾಯಕರಿಂದಲೂ ಸಿಪಿಇಸಿ ಯೋಜನೆಗೆ ಪ್ರಬಲ ವಿರೋಧ ವ್ಯಕ್ತವಾಗಿದೆ.

ಮಾತ್ರವಲ್ಲದೆ ಸಿಪಿಇಸಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಾಗವಾದ ಗಿಲ್ಗಿಟ್ ಬಾಲ್ಟಿಸ್ತಾನ್‍ ಪ್ರದೇಶದಲ್ಲಿ ಹಾದುಹೋಗುವುದರಿಂದ ಯೋಜನೆಯ ಬಗ್ಗೆ ಅಮೆರಿಕ ರಕ್ಷಣಾ ವಿಶ್ಲೇಷಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೇ ವಾದ ಭಾರತದ್ದೂ ಆಗಿದ್ದು, ಆಕ್ರಮಿತ ಕಾಶ್ಮೀರದಲ್ಲಿ ಸಿಪಿಇಸಿ ಯೋಜನೆ ಜಾರಿಗೊಳಿಸಲು ಭಾರತ ಸರ್ಕಾರ ಮೊದಲಿನಿಂದಲೂ ಪ್ರಬಲ ವಿರೋಧ ವ್ಯಕ್ತಪಡಿಸಿದೆ.

(ಎನ್‍ಬಿಎನ್‍)

Leave a Reply

comments

Related Articles

error: