ಕರ್ನಾಟಕ

ತ್ಯಾಗಿಗಳ ಚಾತುರ್ಮಾಸಕ್ಕೆ ಹಾಸನ ಜೈನ ಸಮಾಜದ ವತಿಯಿಂದ ಧವಸ ಧಾನ್ಯಗಳ ಕೊಡುಗೆ

ರಾಜ್ಯ(ಹಾಸನ)ಅ.18:-  ಶ್ರವಣಬೆಳಗೊಳ  ಪಟ್ಟಣದ ಜೈನ ಮಠಕ್ಕೆ ಹಾಸನ ದಿಗಂಬರ ಜೈನ ಸಮಾಜದ ವತಿಯಿಂದ ಕ್ಷೇತ್ರದಲ್ಲಿ ಚಾತುರ್ಮಾಸ ಆಚರಿಸುತ್ತಿರುವ ತ್ಯಾಗಿಗಳ ಆಹಾರ ದಾನಕ್ಕೆ 6 ಟನ್ ಧವಸ ಧಾನ್ಯಗಳು ಹಾಗೂ ಹಣ್ಣು, ತರಕಾರಿಗಳನ್ನು ಕೊಡುಗೆಯಾಗಿ ನೀಡಲಾಯಿತು.

2018ರ ಫೆಬ್ರವರಿಯಲ್ಲಿ ನಡೆಯಲಿರುವ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ರಾಷ್ಟ್ರದ ವಿವಿಧ ಭಾಗಗಳಿಂದ ಆಗಮಿಸಿರುವ ಸುಮಾರು 84 ಕ್ಕೂ ಹೆಚ್ಚು ತ್ಯಾಗಿಗಳು ಕ್ಷೇತ್ರದಲ್ಲಿ ಈ ಬಾರಿ ಚಾತುರ್ಮಾಸ ವ್ರತ ಕೈಗೊಂಡಿದ್ದಾರೆ. ಅವರ ಆಹಾರದ ವ್ಯವಸ್ಥೆಗಾಗಿ ಹಾಸನದ ದಿಗಂಬರ ಜೈನ ಸಮಾಜದ ವತಿಯಿಂದ ಆಹಾರ ಧಾನ್ಯಗಳನ್ನು ಕ್ಷೇತ್ರದ ಪೀಠಾಧಿಪತಿಗಳಾದ  ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಸಮ್ಮುಖದಲ್ಲಿ ಸಮರ್ಪಿಸಿದರು. ಅಕ್ಕಿ, ಗೋಧಿ, ರವೆ, ಸಕ್ಕರೆ, ತುಪ್ಪ, ಎಣ್ಣೆ,ತೊಗರಿಬೇಳೆ, ಹೆಸರುಬೇಳೆ, ಅವಲಕ್ಕಿ, ರೀಫೈನ್ಡ್ ಆಯಿಲ್,ಕಡ್ಲೇಬೇಳೆ, ಬೆಲ್ಲ, ಬ್ಯಾಡಗಿ ಮೆಣಸಿನ ಕಾಯಿ, ದ್ರಾಕ್ಷಿ, ಗೋಡಂಬಿ, ಕಲ್ಲು ಸಕ್ಕರೆ, ಉಪ್ಪು, ಅಲಸಂದೆ, ಉದ್ದಿನಬೇಳೆ ಶೇಂಗಾ ಬೀಜ, ಉರಿಗಡಲೆ,ಮಸಾಲೆ ಸಾಮಾನು, ಮೋಸಂಬಿ, ಸೇಬು, ದಾಳಿಂಬೆ, ಕರ್ಬೂಜ, ಅನಾನಸ್, ಮಸೂರ್ ದಾಲ್ ಹಾಗೂ ತರಕಾರಿಗಳು ಸೇರಿದಂತೆ 6 ಟನ್ ಆಹಾರ ಸಾಮಗ್ರಿಗಳನ್ನು ದಾನವಾಗಿ ನೀಡಿದರು. ಆಹಾರದ ಧಾನ್ಯಗಳನ್ನು ಸ್ವೀಕರಿಸಿದ ನಂತರ ಹಾಸನ ದಿಗಂಬರ ಸಮಾಜದ ಅಧ್ಯಕ್ಷ ಎಂ.ಅಜಿತ್‍ಕುಮಾರ್‍ರವರನ್ನು ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಆಹಾರ ಧಾನ್ಯಗಳಿದ್ದ ವಾಹನವನ್ನು ಮಂಗಳವಾದ್ಯದೊಂದಿಗೆ  ಶ್ರೀಗಳು ಸ್ವಾಗತಿಸಿದರು.

ಈ ವೇಳೆ ಹಾಸನ ಜೈನ ಸಮಾಜದ ಉಪಾಧ್ಯಕ್ಷ ಹೆಚ್.ಎನ್.ರವೀಂದ್ರ ಕುಮಾರ್, ಕಾರ್ಯದರ್ಶಿ ಹೆಚ್.ಎಸ್.ಸುರೇಶ್, ಜಂಟಿ ಕಾರ್ಯದರ್ಶಿ ಕೆ.ಜಿ.ಬ್ರಹ್ಮೇಶ್, ನಿರ್ದೇಶಕರುಗಳಾದ ಹೆಚ್.ಡಿ.ಬಾಹುಬಲಿ ಪ್ರಸಾದ್, ಎಸ್.ಡಿ.ಜಿನೇಶ್ ಪ್ರಸಾದ್, ಹೆಚ್.ಪಿ.ಪ್ರಕಾಶ್, ಕೇಸರಿ ರತ್ನರಾಜಯ್ಯ, ಸುಮಾ ಸುನಿಲ್ ಹಾಗೂ ಸಮಾಜದ ಸದಸ್ಯರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: