ದೇಶಪ್ರಮುಖ ಸುದ್ದಿ

ರೈಲುಗಳಲ್ಲಿ ಜೀವರಕ್ಷಕ ಅನಿಲ ಆಮ್ಲಜನಕ ಸಿಲಿಂಡರ್ ಕಡ್ಡಾಯಗಳಿಸಿದ ಸುಪ್ರೀಮ್‍ ಕೋರ್ಟ್

ನವದೆಹಲಿ, ಪ್ರಮುಖ ಸುದ್ದಿ (ಅ.19): ರೈಲು ಪ್ರಯಾಣದ ವೇಳೆ ಯಾವುದೇ ಪ್ರಯಾಣಿಕರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ತಕ್ಷಣ ನೆರವಾಗಿ ಜೀವ ಉಳಿಸುವ ಸಲುವಾಗಿ ರೈಲುಗಳಲ್ಲಿ ಆಮ್ಲಜನಕ ಕಡ್ಡಾಯಗೊಳಿಸಬೇಕು ಎಂದು ಸುಪ್ರಿಮ್‍ ಕೋರ್ಟ್ ಆದೇಶ ನೀಡಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ.ಎಂ. ಖನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರನ್ನು ಒಳಗೊಂಡಿದ್ದ ಪೀಠವು ಈ ಆದೇಶ ನೀಡಿದ್ದು, ರೈಲುಗಳಲ್ಲಿ ಆಮ್ಲಜನಕ ಸಿಲಿಂಡರ್ ಇಟ್ಟುಕೊಳ್ಳಬೇಕು ಹಾಗೂ ಪ್ರಯಾಣಿಕರು ಉಸಿರಾಟದ ಸಮಸ್ಯೆಗೆ ಸಿಲುಕಿದಾಗ ಅವರಿಗೆ ಆಮ್ಲಜನಕ ಪೂರೈಸುವುದು ಕಡ್ಡಾಯ. ಈ ಸಂಬಂಧ ಆಲ್‍ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ -ಏಮ್ಸ್ ನಿಂದ ನಿರ್ದೇಶನಗಳನ್ನು ಪಡೆದುಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಭಾರತೀಯ ರೈಲ್ವೆಗೆ ನಿರ್ದೇಶಿಸಿದೆ.

ದೂರ ಪ್ರದೇಶಗಳಿಗೆ ಸಂಚರಿಸುವ ರೈಲುಗಳಲ್ಲಿ ಓರ್ವ ವೈದ್ಯಾಧಿಕಾರಿ, ಓರ್ವ ನರ್ಸ್ ಸೇರಿದಂತೆ ಅಗತ್ಯ ವೈದ್ಯಕೀಯ ತಂಡ ಇರಬೇಕು ಎಂದು ರಾಜಸ್ಥಾನ ಹೈಕೋರ್ಟ್‍ನ ಆದೇಶ ಪ್ರಶ್ನಿಸಿ ಕೇಂದ್ರ  ಸರ್ಕಾರ ಸಲ್ಲಿಸಿದ್ದ ಮನವಿಯ ವಿಚಾರಣೆ ನಂತರ ಸುಪ್ರೀಮ್‍ ಕೋರ್ಟ್ ಈ ಮಹತ್ವದ ಆದೇಶ ನೀಡಿದೆ.

ಇಷ್ಟೇ ಅಲ್ಲದೆ ಅನಾರೋಗ್ಯ ಪೀಡಿತ ಪ್ರಯಾಣಿಕರು ಇಲ್ಲವೇ ಸಂಬಂಧಿಕರು ಟಿಕೆಟ್ ಕಲೆಕ್ಟರ್‍ಗೆ ವಿಷಯ ತಿಳಿಸಿ ಆಮ್ಲಜನಕ ಸಿಲಿಂಡರ್ ಪಡೆದುಕೊಳ್ಳಬೇಕು. ತುರ್ತು ಸಂದರ್ಭದಲ್ಲಿ ಮುಂದಿನ ನಿಲ್ದಾಣದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಕಲ್ಪಿಸಬೇಕು ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.

(ಎನ್‍ಬಿಎನ್‍)

Leave a Reply

comments

Related Articles

error: